ವಿಶೇಷ ಸಭೆ ಕರೆಯಲು ಆಗ್ರಹಿಸಿ ಬಿಜೆಪಿ ಮನವಿ
ಶಿವಮೊಗ್ಗ, ಅ. 9: ಜಿಲ್ಲೆಯ ಸೊರಬ ತಾಲೂಕು ಆನವಟ್ಟಿ ಜಿಪಂ ಕ್ಷೇತ್ರದ ಸದಸ್ಯ ವೀರೇಶ್ ಕೊಟಗಿ ಸದಸ್ಯತ್ವ ರದ್ದುಗೊಳಿಸಿ ನ್ಯಾಯಾಲಯ ಆದೇಶಿಸಿರುವ ಹಿನ್ನೆಲೆಯಲ್ಲಿ ತಕ್ಷಣವೇ ಜಿಪಂನ ತುರ್ತು ವಿಶೇಷ ಸಭೆ ಕರೆಯಬೇಕೆಂದು ಆಗ್ರಹಿಸಿ ವಿಪಕ್ಷ ಬಿಜೆಪಿ ಸದಸ್ಯರು ಸೋಮವಾರ ನಗರದ ಜಿಪಂ ಕಚೇರಿಯಲ್ಲಿ ಅಧ್ಯಕ್ಷರು ಹಾಗೂ ಸಿಇಒಗೆ ಮನವಿ ಸಲ್ಲಿಸಿದ್ದಾರೆ.
ಬಿಜೆಪಿ ಆರೋಪವೇನು?: ಸೊರಬದ ಜೆಎಂಎಫ್‌ಸಿ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಲಯವು 1-7-2017 ರಂದು ವೀರೇಶ್ ಕೊಟಗಿಯವರ ಸದಸ್ಯತ್ವ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಸದರಿ ಪ್ರಕರಣದ ತೀರ್ಪಿನ ಅನುಸಾರ ರಾಜ್ಯ ಚುನಾವಣಾ ಆಯೋಗವು ಪತ್ರ ಬರೆದಿದ್ದು, ಕರ್ನಾಟಕ ಪಂಚಾಯತ್ ರಾಜ್ ನಿಯಮ 83 ರಂತೆ ಸ್ಥಾನ ಖಾಲಿ ಆಗಿರುವ ಬಗ್ಗೆ ವರದಿ ನೀಡಿರುತ್ತಾರೆ. ಈ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒರವರಿಗೆ ಚುನಾವಣಾ ಆಯೋಗದಿಂದ ವರದಿ ಕೂಡ ರವಾನೆಯಾಗಿದೆ ಎಂದು ಬಿಜೆಪಿ ತಿಳಿಸಿದೆ.
ಆದ್ದರಿಂದ ಈ ಬಗ್ಗೆ ಚರ್ಚಿಸಲು ಜಿಪಂ ತುರ್ತು ವಿಶೇಷ ಸಭೆ ಕರೆಯಬೇಕು. ಈ ಬಗ್ಗೆ ವಿಳಂಬಕ್ಕೆ ಆಸ್ಪದವಾಗದಂತೆ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರಾದ ಕೆ.ಇ.ಕಾಂತೇಶ್, ತಮ್ಮಡಿಹಳ್ಳಿ ನಾಗರಾಜ್, ವೀರಭದ್ರಪ್ಪ ಪೂಜಾರ್, ಸೌಮ್ಯ ಬೋಜ್ಯನಾಯ್ಕಿ, ಸುರೇಶ್ ಸ್ವಾಮಿರಾವ್, ಅರುಂಧತಿ ಇತರರಿದ್ದರು.





