ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ: ಸಚಿವ ಕಾಗೋಡು ತಿಮ್ಮಪ್ಪ
ಸಾಗರ, ಅ.9: ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಇಲ್ಲಿನ ಕಾಂಗ್ರೆಸ್ ಪಕ್ಷದ ವತಿಯಿಂದ ಸೋಮವಾರ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅ. 3ರಿಂದ ಈ ತಿಂಗಳ ಕೊನೆವರೆಗೆ ರಾಜ್ಯದ ಎಲ್ಲ ತಾಲೂಕುಗಳ ಬೂತ್‌ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಸರಕಾರದ ನಾಲ್ಕು ವರ್ಷದ ಸಾಧನೆ ಜೊತೆಗೆ ಕೇಂದ್ರದ ಬಿಜೆಪಿ ಸರಕಾರದ ವೈಫಲ್ಯವನ್ನು ಜನರಿಗೆ ತಲುಪಿಸಲಾಗುತ್ತಿದೆ ಎಂದರು.
ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಅದನ್ನು ಬೆಳಗಾವಿಯಲ್ಲಿ ನ. 7ರಿಂದ ನಡೆಯುವ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಚರ್ಚೆಗೆ ತರಲಾಗುತ್ತದೆ. ಇಂತಹ ಕಾಯ್ದೆಗಳನ್ನು ಅನುಷ್ಠಾನಕ್ಕೆ ತರುವುದು ಸುಲಭದ ಕೆಲಸವಲ್ಲ. ಇದೊಂದು ಸೂಕ್ಷ್ಮ ವಿಚಾರವಾಗಿದೆ. ಜನರು ಸಾವಿರಾರು ವರ್ಷಗಳಿಂದ ಇರಿಸಿಕೊಂಡು ಬಂದಿರುವ ಕೆಲವು ನಂಬಿಕೆಗಳನ್ನು ಕಾಯ್ದೆ ಮೂಲಕ ಕಟ್ಟಿ ಹಾಕುವುದು ಕಷ್ಟಸಾಧ್ಯ. ಕೆಲವೊಂದು ಆಚರಣೆಗಳನ್ನು ಕಾಯ್ದೆ ವ್ಯಾಪ್ತಿಗೆ ತರಲಾಗಿದ್ದು, ಇನ್ನು ಕೆಲವು ಬಿಡಲಾಗಿದೆ. ಅಧಿವೇಶನದಲ್ಲಿ ಕಾಯ್ದೆ ಕುರಿತು ಚರ್ಚೆ ನಡೆಸಿ, ಮತ್ತಷ್ಟು ಸೇರಿಸುವ ಅಥವಾ ಕೆಲವನ್ನು ಕೈಬಿಡುವ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್, ನಗರಸಭೆ ಅಧ್ಯಕ್ಷೆ ಬೀಬಿ ಫಸಿಹಾ, ಉಪಾಧ್ಯಕ್ಷೆ ಸರಸ್ವತಿ, ಕಾಡಾ ಸದಸ್ಯ ಕೆ.ಎಲ್.ಭೋಜರಾಜ್, ಪ್ರಮುಖರಾದ ಡಿ.ದಿನೇಶ್, ಮೈಕೆಲ್ ಡಿಸೋಜ, ಎನ್.ಲಲಿತಮ್ಮ, ಮಹಾಬಲೇಶ್ವರ ಶೇಟ್, ವಿನೋದಮ್ಮ, ಕನ್ನಪ್ಪ ಮುಳಕೇರಿ ಇತರರು ಭಾಗವಹಿಸಿದ್ದರು.







