ಬಿಜೆಪಿಯಿಂದ ಸಬ್ ಕಾ ವಿನಾಸ್, ಕಾರ್ಪೊರೇಟ್ ವಿಕಾಸ್: ಸಿಪಿಎಂ ರಾಜ್ಯ ಕಾರ್ಯದರ್ಶಿ ನಿತ್ಯಾನಂದ ಸ್ವಾಮಿ

ಬೈಂದೂರು, ಅ.9: ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿಯ ಗುರಿ ಈಗ ‘ಸಬ್ ಕಾ ವಿನಾಸ್, ಕಾರ್ಪೊರೇಟ್ ವಿಕಾಸ್-ವಿದೇಶಿ ಕಂಪನಿ ಕಾ ವಿಕಾಸ್’ ಆಗಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ನಿತ್ಯಾನಂದ ಸ್ವಾಮಿ ಟೀಕಿಸಿದ್ದಾರೆ.
ಸಿಪಿಐಎಂ ಬೈಂದೂರು ವಲಯ ಸಮಿತಿ ನೇತೃತ್ವದಲ್ಲಿ ಬೈಂದೂರು ರೋಟರಿ ಭವನದಲ್ಲಿ ರವಿವಾರ ಆಯೋಜಿಸಲಾದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಮಿಕ ಸಂಘಟನೆಗಳ ಸದಸ್ಯರ ಬೃಹತ್ ರಾಜಕೀಯ ಸಮಾವೇಶ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ವರ್ಷಕ್ಕೆ 2 ಕೋಟಿಯಂತೆ ಮುಂದಿನ ಚುನಾವಣಾ ವೇಳೆಗೆ 10 ಕೋಟಿ ಉದ್ಯೋಗಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂಬ ಮೋದಿ ಭರವಸೆ ಕೇವಲ ಚುನಾವಣಾ ಪೊಳ್ಳು ಮಾತು ಎಂಬುದು 3 ವರ್ಷ ಕಳೆಯುವ ವೇಳೆಗೆ ದೃಢಪಟ್ಟಿದೆ ಎಂದು ನಿತ್ಯಾನಂದ ಸ್ವಾಮಿ ಆರೋಪಿಸಿದರು.
ಗ್ರಾಮೀಣ ಉದ್ಯೋಗಕಾಂಕ್ಷಿಗಳ ಪಾಡು ಬಹಳ ಶೋಚನೀಯವಾಗಿದ್ದು, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉದ್ಯೋಗ ಗಳ ಬೇಡಿಕೆ ಇದಕ್ಕೆ ಒಂದು ಪ್ರಮುಖ ನಿರ್ದಶನ. 2014-15ರಲ್ಲಿ 4.85 ಕೋಟಿ ಕುಟುಂಬ ಉದ್ಯೋಗ ಕೇಳಿದ್ದು, 2016-17ರಲ್ಲಿ ಅದರ ಸಂಖ್ಯೆ 5.69 ಕೋಟಿಗೆ ಏರಿತ್ತು. 2017-18ರ ಒಂದೇ ತಿಂಗಳಲ್ಲಿ 1.38 ಕೋಟಿ ಕುಟುಂಬ ಉದ್ಯೋಗ ಕೇಳಿದೆ. ಆದರೆ 2016-17ರಲ್ಲಿ 58 ಲಕ್ಷ ಕುಟುಂಬಗಳಿಗೆ ಕೆಲಸ ಸಿಕ್ಕಿಲ್ಲ ಎಂದು ಅವರು ತಿಳಿಸಿದರು.
ಉತ್ಪಾದನಾ ಚಟುವಟಿಕೆಗಳಲ್ಲಿ ಬಂಡವಾಳ ಹೂಡಲು ಹೊಸ ಹೂಡಿಕೆಗಳ ಪ್ರಮಾಣ 2015-16ರಲ್ಲಿ ಶೇ.6.1 ಇದ್ದದ್ದು, 2016-17ರಲ್ಲಿ ಶೇ.0.06ಕ್ಕೆ ಇಳಿದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚಿನ ಮಾಹಿತಿ ಪ್ರಕಾರ ಕೈಗಾರಿಕೆಗಳಿಗೆ ಬ್ಯಾಂಕ್ ಸಾಲಗಳ ಪ್ರಮಾಣದಲ್ಲಿ ಆಗಿರುವ ಹೆಚ್ಚಳ ಕೇವಲ ಶೇ.0.3 ಅಂದರೆ ಹೊಸ ಹೂಡಿಕೆಗಳಲ್ಲಿ ಹೊಸ ಉದ್ಯೋಗಗಳ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತಿಲ್ಲ ಎಂದು ನಿತ್ಯಾನಂದ ಸ್ವಾಮಿ ಹೇಳಿದರು.
ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಮುಖಂಡ ರಾದ ಕೆ. ಶಂಕರ, ಎಚ್.ನರಸಿಂಹ, ಸುರೇಶ ಕಲ್ಲಾಗರ, ರಾಜೀವ ಪಡುಕೋಣೆ, ನಾಗರತ್ನ ನಾಡ, ಸಂತೋಷ ಹೆಮ್ಮಾಡಿ, ಮಹಾಬಲ ವಡೇರ ಹೋಬಳಿ, ಯು. ದಾಸಭಂಡಾರಿ, ದಿನೇಶ ಮೊಗವೀರ, ಜಯಶ್ರೀ ಉಪಸ್ಥಿತರಿದ್ದರು. ಅಧ್ಯಕ್ಷತೆ ಯನ್ನು ಪಕ್ಷದ ಜಿಲ್ಲಾ ಮುಖಂಡ ವೆಂಕಟೇಶ ಕೋಣಿ ವಹಿಸಿದ್ದರು. ಗಣೇಶ ತೊಂಡೆಮಕ್ಕಿ ವಂದಿಸಿದರು.







