ಮಡಿಕೇರಿ: ಸಾರಿಗೆ ನಿಯಮ ಉಲ್ಲಂಘನೆ ಸೂಕ್ತ ಕ್ರಮಕ್ಕೆ ಒತ್ತಾಯ
ಮಡಿಕೇರಿ, ಅ.9: ಹೊರ ರಾಜ್ಯದಿಂದ ಕೊಡಗು ಜಿಲ್ಲೆಯನ್ನು ಪ್ರವೇಶಿಸುತ್ತಿರುವ ವಾಹನಗಳು ಸಾರಿಗೆ ನಿಯಮವನ್ನು ಉಲ್ಲಂಘಿಸುತ್ತಿದ್ದು, ಕೊಡಗು ಜಿಲ್ಲಾ ಪ್ರವಾಸಿಗರ ವಾಹನ ಮಾಲಕರು ಮತ್ತು ಚಾಲಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಳಿಬಣ್ಣದ ಸಂಖ್ಯಾ ಫಲಕ ಹೊಂದಿರುವ ವಾಹನಗಳು ಕೂಡಾ ಸಾರಿಗೆ ನಿಯಮವನ್ನು ಉಲ್ಲಂಘಿಸುತ್ತಿವೆ. ಕರಿಕೆ, ಪೆರಂಬಾಡಿ, ಕುಟ್ಟ ಸೇರಿದಂತೆ ಕೊಡಗಿನ ಗಡಿಭಾಗಗಳಲ್ಲಿ ಸಾರಿಗೆ ಇಲಾಖೆ ತನಿಖಾ ಕೇಂದ್ರ ತೆರೆಯಬೇಕು, ಹೊರ ರಾಜ್ಯದಿಂದ ಬರುವ ವಾಹನಗಳನ್ನು ತಪಾಸಣೆಗೆ ಒಳಪಡಿಸಬೇಕು. 300 ರೂ. ಪಾವತಿಸಿ ಅನುಮತಿ ಪಡೆದು ಬರುವ ಹೊರ ರಾಜ್ಯದ ವಾಹನಗಳು ಕೊಡಗು ಜಿಲ್ಲೆಯಲ್ಲಿ ರಾಜಾರೋಷವಾಗಿ ಬಂದು, ಹೋಗುತ್ತಿರುವ ಬಗ್ಗೆ ಗಮನಹರಿಸಬೇಕು, ತೆರಿಗೆ ವಂಚನೆ ಮಾಡಿ ಕಾನೂನು ಬಾಹಿರವಾಗಿ ಬಿಳಿ ಬಣ್ಣದ ಸಂಖ್ಯಾ ಫಲಕ ಹೊಂದಿರುವ ವಾಹನಗಳು ಟ್ಯಾಕ್ಸಿಗಳಾಗಿ ಸಂಚರಿಸದುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಡಳಿತ ನಿರ್ಲಕ್ಷ್ಯ: ಭಾಗಮಂಡಲದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಚಾಲಕರು ಹರಸಹಾಸ ಪಡುವಂತ್ತಾಗಿದೆ. ಮಳೆಗಾಲಕ್ಕೂ ವೊದಲೆ ರಸ್ತೆ ದುರಸ್ತಿ ಪಡಿಸಬೇಕಾಗಿದ್ದ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದ ಪರಿಣಾಮ ಇಂದು ಚಾಲಕರು ಕಷ್ಟ ಅನುಭವಿಸುವಂತ್ತಾಗಿದೆ. ನಿಗಧಿತ ಸಮಯದಲ್ಲಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಭಾಗಮಂಡಲ ರಸ್ತೆತಡೆ ಪ್ರತಿಭಟನೆ ನಡೆಸುವುದಾಗಿ ಎಂದು ಕೊಡಗು ಜಿಲ್ಲಾ ಪ್ರವಾಸಿಗರ ವಾಹನ ಮಾಲಕರ ಮತ್ತು ಚಾಲಕರ ಸಂಘದ ಉಪಾಧ್ಯಕ್ಷ ಎಚ್ಚರಿಕೆ ನೀಡಿದರು.







