ಇಂದು ನಾವು ಪ್ರಿಂಟ್ ಮಾಡಿದ ಕಾಗದದ ಕಂತೆ ಹೊತ್ತೊಯ್ಯುವವರಾಗಿದ್ದೇವೆ : ಅಂಚೆ ಪೇದೆ ಪಿರೇರಾ

ತಿರುವನಂತಪುರ, ಅ. 10: ದಶಕಗಳ ಹಿಂದಿನ ವರೆಗೆ ಹಲವು ಮನೆಗಳು ಇವರಿಗಾಗಿ ಕಾಯುತ್ತಿದ್ದುವು. ಪತ್ರ, ಶುಭಾಶಯ ಪತ್ರ ಹಾಗೂ ಇತರ ಪಾರ್ಸೆಲ್‌ಗಳಿಂದ ಇವರ ಬ್ಯಾಗ್ ತುಂಬಿರುತ್ತಿತ್ತು. ಮಳೆ, ಬಿಸಿಲು ಎನ್ನದೆ ಇವರು ಕಿಲೋಮೀಟರ್‌ಗಟ್ಟಲೆ ಸೈಕಲ್ ತುಳಿದು ಇವುಗಳನ್ನು ವಿತರಿಸುತ್ತಿದ್ದರು.
ಹೊರಜಗತ್ತು ಹಾಗೂ ಗ್ರಾಮದ ನಡುವೆ ಸಂಪರ್ಕ ಕಲ್ಪಿಸುವ ಏಕೈಕ ವ್ಯಕ್ತಿ ಇವರಾಗಿದ್ದರು. ಆದರೆ, ಸಂವಹನದ ಪ್ರಮುಖ ಸಾಧನವಾಗಿ ಇಮೇಲ್, ಇ-ಕಾರ್ಡ್, ಮೊಬೈಲ್ ಫೋನ್ ಬಂದ ಬಳಿಕ ಕೈಬರಹದ ಪತ್ರಗಳು ಹಾಗೂ ಶುಭಾಶಯ ಪತ್ರಗಳು ಮಾಯವಾದವು.
ಕೇರಳದಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡ ನೂರಾರು ಅಂಚೆ ಪೇದೆಗಳಲ್ಲಿ ಫರ್ಡಿನೆಂಡ್ ಪಿರೇರಾ ಕೂಡ ಒಬ್ಬರು.
ರಾಷ್ಟ್ರೀಯ ಅಂಚೆ ದಿನವಾದ ಇಂದು ರಾಜ್ಯ ರಾಜಧಾನಿಯ ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪಿರೇರಾ, ಕಳೆದ ಒಂದು ದಶಕಗಳಿಂದ ಸಮಾಜದಲ್ಲಿ ಅಂಚೆ ಪೇದೆಯ ಬಗ್ಗೆ ಜನರ ನಿಲುವು ಬದಲಾಗುತ್ತಿದೆ. ಅಂಚೆ ಪೇದೆ ಪ್ರಿಂಟ್ ಮಾಡಿದ ಕಾಗದದ ಕಂತೆಹೊತ್ತೊಯ್ಯುವ ವ್ಯಕ್ತಿಯಾಗಿದ್ದಾರೆ ಎಂದಿದ್ದಾರೆ.
ನೂತನ ಸಂವಹನ ಮಾಧ್ಯಮದಿಂದ ಒಂದು ಕಾಲದಲ್ಲಿ ಸಮಾಜದ ಒಂದು ಭಾಗವಾಗಿದ್ದ ಅಂಚೆ ಪೇದೆಗಳು ತಮ್ಮ ಅಸ್ತಿತ್ವ ಕಳೆದುಕೊಂಡಿದ್ದಾರೆ ಎಂದು 55 ವರ್ಷದ ಪಿರೇರಾ ಹೇಳಿದ್ದಾರೆ.
ಹಿಂದೊಂದು ದಿನವಿತ್ತು, ಸುಃಖ ಅಥವಾ ದುಃಖವಾಗಿರಬಹುದು ಜನರು ತಮ್ಮ ಬದುಕಿನ ಪ್ರತಿಕ್ಷಣಗಳನ್ನು ಪತ್ರಗಳು ಹಾಗೂ ಅಂಚೆ ಕಾರ್ಡ್‌ಗಳ ಮೂಲಕ ಹಂಚಿಕೊಳ್ಳುತ್ತಿದ್ದರು. ನಾವು ಅವರ ಬದುಕಿನ ಸಂದೇಶ ವಾಹಕರಾಗಿದ್ದೆವು. ಹಲವು ಮನೆಗಳಿಗೆ ನಾವು ಪತ್ರವನ್ನು ಮಾತ್ರ ರವಾನಿಸುತ್ತಿರಲಿಲ್ಲ, ಬದಲಾಗಿ ಅದನ್ನು ಓದಿ ಹೇಳುತ್ತಿದ್ದೆವು ಎಂದು ಪಿರೇರಾ ಹೇಳಿದ್ದಾರೆ.







