ಬಿಜೆಪಿ ಮುಖಂಡರ ವಿರುದ್ಧ ಮಾನನಷ್ಟ ಮೊಕದ್ದಮೆ: ಐವನ್ ಡಿಸೋಜ
ಮಂಗಳೂರು, ಅ.11: ಮುಖ್ಯಮಂತ್ರಿ ಸಿದ್ದರಾಮಯ್ಯ 6.26 ಎಕರೆ ಜಮೀನು ಡಿನೋಟಿಫೈ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರ ಆರೋಪದಲ್ಲಿ ಹುರುಳಿಲ್ಲ. ಯಾವುದೇ ದಾಖಲೆ ಇಲ್ಲದೆ ಆರೋಪ ಮಾಡಿದವರ ವಿರುದ್ಧ ಮಂಗಳೂರು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ತಿಳಿಸಿದ್ದಾರೆ.
ಮನಪಾ ಕಟ್ಟಡದಲ್ಲಿರುವ ತನ್ನ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿನೋಟಿಫೈಗೆ ಸಂಬಂಧಿಸಿ ಬಿಜೆಪಿ ಮುಖಂಡ, ಮೇಲ್ಮನೆ ಸದಸ್ಯ ಬಿ.ಜೆ.ಪುಟ್ಟಸ್ವಾಮಿ, ಗೋ ಮಧುಸೂದನ್ ವೃಥಾ ಆರೋಪ ಮಾಡಿದ್ದಾರೆ. ಈ ಆರೋಪಗಳಿಗೆ ಸಂಬಂಧಿಸಿ ಬಿ.ಜೆ.ಪುಟ್ಟಸ್ವಾಮಿ ಸಹಿತ ಮೂವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದು. ಈ ಬಗ್ಗೆ ಕಾನೂನು ತಜ್ಞರ ಜತೆ ಮಾತುಕತೆ ನಡೆಸಿದ್ದೇನೆ ಎಂದರು.
ಬಿಜೆಪಿಗರು ಸುಳ್ಳು ಆರೋಪ ಮಾಡುವುದರಲ್ಲಿ ನಿಸ್ಸೀಮರು. ಕಾಂಗ್ರೆಸ್ ಅಭಿವೃದ್ಧಿ ಪರ ಕಾರ್ಯಕ್ರಮ ಹಮ್ಮಿಕೊಂಡರೆ, ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ.ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದೇ ಅವರ ಕೆಲಸ. ದಾಖಲೆಯನ್ನು ಪರಿಶೀಲನೆ ಮಾಡಿದ್ದೇನೆ. ಅದರಲ್ಲಿ ಸಿಎಂ ಡಿನೋಟಿಫೈ ಮಾಡಿರುವುದು ಕಂಡು ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಐವನ್ ಡಿಸೋಜ ನುಡಿದರು.
ಶಾಸಕ ವಸಂತ ಬಂಗೇರ ಮನವಿ ಆಧರಿಸಿ ಈ ಆಸ್ತಿಗೆ ಸಂಬಂಧಿಸಿದಂತೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಬಿಡಿಎ ಆಯುಕ್ತರಿಗೆ ಸೂಚಿಸಿದ್ದರು. ಶಾಸಕರೊಬ್ಬರು ಮನವಿ ಮಾಡಿದಾಗ ಪರಿಶೀಲಿಸುವಂತೆ ಸೂಚಿಸುವುದು ಸಿಎಂ ಅವರ ಧರ್ಮ. ಆದರೆ ಡಿನೋಟಿಫೈ ಮಾಡುವಂತೆ ಒತ್ತಡ ಹಾಕಿಲ್ಲ. ನ್ಯಾಯಾಲಯದ ಆದೇಶದಂತೆ ಭೂಮಿ ಹಂಚಿಕೆಯಾಗಿರಬಹುದು.ಅದರಲ್ಲಿ ಸರಕಾರದ ಹಸ್ತಕ್ಷೇಪ ಹೇಗಾಗುತ್ತದೆ? ಎಂದು ಐವನ್ ಪ್ರಶ್ನಿಸಿದರು. *‘ರೀಲ್’ ರಾಜಕೀಯ : ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಮಾಡಲು ಬಿಜೆಪಿಗರಿಗೆ ಏನೂ ಸಿಗದೆ ಇದ್ದಾಗ ‘ರೀಲ್’ ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಅಮಿತ್ ಶಾ ಅವರಂತಹ ವ್ಯಕ್ತಿ ಅಧ್ಯಕ್ಷರಾಗಿರುವ ರಾಷ್ಟ್ರೀಯ ಪಕ್ಷಕ್ಕೆ ಶೋಭೆಯಲ್ಲ. ಸುಳ್ಳು ಆರೋಪದ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಐವನ್ ಹೇಳಿದರು.
ಮಾಜಿ ಮೇಯರ್ ಕೆ.ಅಶ್ರಫ್, ಮಾಜಿ ಕಾರ್ಪೊರೇಟರ್ ನಾಗೇಂದ್ರ ಕುಮಾರ್, ಹೇಮನಾಥ ಶೆಟ್ಟಿ ಕಾವು, ಶಾಹುಲ್ ಹಮೀದ್, ನಝೀರ್ ಬಜಾಲ್, ಅಮೃತ್ ಕದ್ರಿ ಉಪಸ್ಥಿತರಿದ್ದರು.







