ಅ.18: ಗೂಡುದೀಪ ಸ್ಪರ್ಧೆ
ಮಂಗಳೂರು, ಅ.11: ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭ ಸರ್ವ ಧರ್ಮಗಳ ಸಂಗಮಕ್ಕೆ ಅಕ್ಕಿ ವಿತರಣೆ, ಗೂಡುದೀಪ, ಭಾಷಣ ಹಾಗೂ ಚಿತ್ರಕಲಾ ಸ್ಪರ್ಧೆಯು ಅ.18ರಂದು ಅಪರಾಹ್ನ 3 ಗಂಟೆಯಿಂದ ನಗರದ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ತಿಳಿಸಿದರು.
ಮನಪಾ ಕಟ್ಟಡದಲ್ಲಿರುವ ತನ್ನ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ, ಪ್ರೌಢ ಶಾಲೆ, ಕಾಲೇಜಿನ 150ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ದೀಪಾವಳಿ ಸಂಭ್ರಮ ಕಲ್ಪನೆಯ ಚಿತ್ರಕಲಾ ಸ್ಪರ್ಧೆ, ಆಧುನಿಕ ಮತ್ತು ಸಾಂಪ್ರದಾಯಿಕ 2 ವಿಭಾಗಗಳಲ್ಲಿ ಗೂಡುದೀಪ ಸ್ಪರ್ಧೆ ಏರ್ಪಡಿಸಲಾಗಿದೆ. ಸುಮಾರು 200ಕ್ಕೂ ಅಧಿಕ ಗೂಡುದೀಪ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದರು.
ಗೂಡುದೀಪ ಸ್ಪರ್ಧೆಯ ಪ್ರತಿಯೊಂದು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಚಿನ್ನದ ಪದಕ ನೀಡಲಾಗುವುದು. ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುವುದು. ದೀಪಾವಳಿ ಹಬ್ಬದ ಅಂಗವಾಗಿ 1,000 ಮಂದಿಗೆ ತಲಾ 5 ಕೆ.ಜಿ.ಯಂತೆ ಅಕ್ಕಿ ವಿತರಣೆ ಮಾಡಲಾಗುವುದು ಎಂದರು.
ದೀಪಾವಳಿ ಹಬ್ಬದ ಸಂದರ್ಭ ಸರ್ವ ಧರ್ಮೀಯರು ಒಗ್ಗೂಡಿ ಹಬ್ಬಗಳನ್ನು ಆಚರಣೆ ಮಾಡಬೇಕು ಎಂಬ ಸಂದೇಶ ನೀಡುವ ಸಲುವಾಗಿ ಎರಡನೇ ವರ್ಷ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲ ಕಾರ್ಯಕ್ರಮಗಳನ್ನು ಸ್ಥಳೀಯ ಚಾನೆಲ್ ಮೂಲಕ ನೇರ ಪ್ರಸಾರ ಮಾಡಲಾಗುವುದು. ರಾತ್ರಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಐವನ್ ಡಿಸೋಜ ಹೇಳಿದರು.







