ಜಲಕೃಷಿಯಲ್ಲಿ ಮೇವು ಬೆಳೆ ಉತ್ಪಾದನಾ ಘಟಕ ಉದ್ಘಾಟನೆ
ಬ್ರಹ್ಮಾವರದಲ್ಲಿ ಕೃಷಿಮೇಳ
ಉಡುಪಿ, ಅ.11: ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಡಿಪ್ಲೋಮ ಕೃಷಿ ಮಹಾ ವಿದ್ಯಾಲಯ ಬ್ರಹ್ಮಾವರ ಅಲ್ಲದೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಅ.14 ಮತ್ತು 15ರಂದು ಆಯೋಜಿಸಿರುವ ಎರಡು ದಿನಗಳ ಕೃಷಿ ಮೇಳದಲ್ಲಿ ಜಲಕೃಷಿಯಲ್ಲಿ ಮೇವು ಬೆಳೆ ಉತ್ಪಾದನಾ ಘಟಕ ಉದ್ಘಾಟನೆಗೊಳ್ಳಲಿದೆ ಎಂದು ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಯು.ಪಾಟೀಲ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಮೇಳದ ಮೊದಲ ದಿನ ‘ಗೇರು, ಕೋಕೋ, ಕಾಳುಮೆಣಸು ಹಾಗೂ ಇತರ ತೋಟಗಾರಿಕಾ ಬೆಳೆಗಳು’ ಕುರಿತು ವಿಚಾರಸಂಕಿರಣ ನಡೆಯಲಿದೆ. ಎರಡನೇ ದಿನದಂದು ‘ಸಮಗ್ರ ಕೃಷಿ ಪದ್ಧತಿಗಳ ಬಗ್ಗೆ ರೈತರಿಂದ ರೈತರಿಗೆ ಮಾಹಿತಿ’, ‘ಜಲಸಂರಕ್ಷಣೆ ಮತ್ತು ಅಂತರ್ಜಲ ಮರುಪೂರಣ’, ‘ಪುಷ್ಪಕೃಷಿ ಮತ್ತು ಸಂವಾದ’ ವಿಚಾರಸಂಕಿರಣಗಳನ್ನು ಆಯೋಜಿಸಲಾಗಿದೆ ಎಂದರು.
ಆ.15ರ ಸಂಜೆ 4:30ಕ್ಕೆ ರೈತರು ಹಾಗೂ ವಿಜ್ಞಾನಿಗಳ ನಡುವೆ ಸಂವಾದ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಕೃಷಿ ಮೇಳದಲ್ಲಿ ಪ್ರಗತಿಪರ ಕೃಷಿಕರು, ಕೃಷಿ ತಜ್ಞರು ಹಾಗೂ ಸಂಶೋಧಕರು ಭಾಗವಹಿಸಲಿದ್ದಾರೆ. ಕೃಷಿ ಮೇಳವನ್ನು ಅ.14ರ ಶನಿವಾರ ಬೆಳಗ್ಗೆ 10:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದು, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿವಿಯ ಕುಲಪತಿ ಡಾ.ಪಿ.ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಾವರ ಡಿಪ್ಲೋಮಾ ಕೃಷಿ ವಿವಿಯ ಪ್ರಾಂಶುಪಾಲರಾದ ಡಾ.ಕೆ.ವಿ.ಸುಧೀರ್ ಕಾಮತ್, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಬಿ.ಧನಂಜಯ, ಡಾ.ನವೀನ್ ಎನ್.ಇ., ಎಂ.ಸಿ. ಕುಂದರ್ ಉಪಸ್ಥಿತರಿದ್ದರು.







