ಉಡುಪಿ: ಜಿಲ್ಲಾ ಮಟ್ಟದ ಭಜನಾ ಕಮ್ಮಟ, ಸಮಾವೇಶ
ಉಡುಪಿ, ಅ.11: ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಆಶ್ರಯದಲ್ಲಿ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ಭಜನಾ ಕಮ್ಮಟ ಹಾಗೂ ಭಜನಾ ಮಂಡಳಿಗಳ ಸಮಾವೇಶ ಅಲ್ಲದೇ ಆಯ್ದ 150 ಭಜನಾ ಮಂಡಳಿಗಳಿಗೆ ಭಜನಾ ಪರಿಕರಗಳ ವಿತರಣೆ ಕಾರ್ಯಕ್ರಮ ಅ.15ರ ರವಿವಾರ ಬೆಳಗ್ಗೆ 9:30ರಿಂದ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಮಾಧವ ಸುವರ್ಣ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಜನೆ ಮತ್ತು ಕುಣಿತದ ಭಜನೆ ತರಬೇತಿ, ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಆಯ್ದ ಭಜನಾ ಮಂಡಳಿಗಳಿಗೆ ಹಾರ್ಮೋನಿಯಂ, ತಬಲಾ ಹಾಗೂ ತಾಳಗಳ ವಿತರಣೆ ಮಾಡಲಾಗುವುದು ಎಂದು ಅವರು ವಿವರಿಸಿದರು.
ಸಮಾವೇಶದ ಉದ್ಘಾಟನೆಯನ್ನು ಉದ್ಯಮಿ ಡಾ.ಜಿ.ಶಂಕರ್ ಅವರು ಬೆಳಗ್ಗೆ 10ಗಂಟೆಗೆ ನೆರವೇರಿಸಲಿದ್ದು, ಮಾಧವ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. 10:15ಕ್ಕೆ ಕುಣಿತದ ಭಜನೆ ಪ್ರಾತ್ಯಕ್ಷಿಕೆ ನಡೆಯಲಿದೆ. 10:30ಕ್ಕೆ ಬೆಂಗಳೂರು ದೂರದರ್ಶನದ ಸಂಗೀತ ನಿರ್ದೇಶಕ ಎಂ.ಎಸ್.ಗಿರಿಧರ್ ಭಜನಾ ತರಬೇತಿಯನ್ನು ನೀಡಲಿದ್ದಾರೆ.
ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಶಂಕರ್‌ದಾಸ್ ಚೆಂಡ್ಕಳ ಅವರು ಅಪರಾಹ್ನ 12ಕ್ಕೆ ಕುಣಿತದ ಭಜನಾ ತರಬೇತಿ ನೀಡಲಿದ್ದಾರೆ. ಅಪರಾಹ್ನ 2:00ಕ್ಕೆ ಡಾ.ಜಿ.ಶಂಕರ್ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.ಬೆಂಗಳೂರಿನ ಶ್ರೀಹರಿದಾಸ ಸಂಘದ ಅಧ್ಯಕ್ಷ ಹಾಗೂ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಹ.ರಾ. ನಾಗರಾಜಾಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಉಡುಪಿ ಜಿಲ್ಲೆಯಲ್ಲಿ ಸುಮಾರು 600 ಭಜನಾ ಮಂಡಳಿಗಳಿದ್ದು, 1,200ಕ್ಕೂ ಅಧಿಕ ಸದಸ್ಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಆಯ್ದ 150 ಭಜನಾ ಮಂಡಳಿಗಳಿಗೆ ಹಾರ್ಮೋನಿಯಂ, ತಬಲಾ ಹಾಗೂ ತಾಳಗಳನ್ನು ವಿತರಿಸುವ ಡಾ.ಜಿ.ಶಂಕರ್, ಸ್ಮರಣ ಸಂಚಿಕೆಯನ್ನೂ ಬಿಡುಗಡೆಗೊಳಿಸವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಎ.ಶಿವಕುಮಾರ್, ಸಂಘಟನಾ ಕಾರ್ಯದರ್ಶಿ ಸುಂದರ ಜತ್ತನ್, ಕಿಶೋರ್ ಕುಮಾರ್, ಯಶೋಧ ಕೇಶವ ಹಾಗೂ ಅಮಿತಾ ಗಿರೀಶ್ ಉಪಸ್ಥಿತರಿದ್ದರು.







