"ಬ್ರಾಹ್ಮಣ ಅಟ್ರಾಸಿಟಿ ಆ್ಯಕ್ಟ್ ಜಾರಿಗೆ ತನ್ನಿ"
'ಬ್ರಾಹ್ಮಣರ ವಿರುದ್ಧ ದ್ವೇಷ' ನಿಲ್ಲಿಸಲು ಸುಪ್ರೀಂ ಕೋರ್ಟ್, ಪ್ರಧಾನಿಗೆ ಮನವಿ ಅಭಿಯಾನ

ಹೊಸದಿಲ್ಲಿ, ಅ.11: ದೇಶದಲ್ಲಿ ಬ್ರಾಹ್ಮಣರ ವಿರುದ್ಧ ದ್ವೇಷ ಹರಡಲಾಗುತ್ತಿದ್ದು, ಇದನ್ನು ತಡೆಯಬೇಕೆಂದು change.org ಮೂಲಕ ಬದ್ರಿನಾಥ್ ಕಂಚಿ ಎಂಬವರು ಮನವಿ ಅಭಿಯಾನವೊಂದು ಆರಂಭಿಸಿದ್ದಾರೆ.
ಬ್ರಾಹ್ಮಣರು ನಿರಂತರವಾಗಿ ತುಳಿತಕ್ಕೊಳಗಾಗುತ್ತಿದ್ದು, ಅವರನ್ನು ತಪ್ಪಿತಸ್ಥರಂತೆ ಬಿಂಬಿಸಲಾಗುತ್ತಿದೆ. ಸಮಾಜದಲ್ಲಿ ಬ್ರಾಹ್ಮಣರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು. ಅಲ್ಪಸಂಖ್ಯಾತರಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. 6 ತಿಂಗಳ ಹಿಂದೆಯೇ ಈ ಅಭಿಯಾನ ಆರಂಭವಾಗಿದ್ದು, ಈಗಾಗಲೇ 37,000 ಮಂದಿ ಸಹಿ ಹಾಕಿದ್ದಾರೆ. ಪರಿಶಿಷ್ಟ ಜಾತಿ/ಪಂಗಡದವರ ವಿರುದ್ಧದ ದೌರ್ಜನ್ಯಗಳನ್ನು ತಡೆಯಲು ಇರುವ ಎಸ್ಸಿ ಎಸ್ಟಿ ಅಟ್ರಾಸಿಟಿ ಆ್ಯಕ್ಟ್ ನಂತೆ ಬ್ರಾಹ್ಮಣರ ವಿರುದ್ಧದ ದೌರ್ಜನ್ಯಗಳನ್ನು ತಡೆಯಲು ಬ್ರಾಹ್ಮಣ ಅಟ್ರಾಸಿಟಿ ಆ್ಯಕ್ಟ್ ಜಾರಿಗೆ ತರಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಬದ್ರಿನಾಥ್ ಕಂಚಿ ಆರಂಭಿಸಿರುವ ಈ ಅಭಿಯಾನದ ಮನವಿಯ ಸಂಪೂರ್ಣ ಸಾರಾಂಶ ಇಲ್ಲಿದೆ.
“ಬ್ರಾಹ್ಮಣ ಸಮುದಾಯವು ಭಾರತದ ಗೌರವಾನ್ವಿತ ಸಮುದಾಯವಾಗಿತ್ತು. ಇತರ ಜಾತಿಗಳ ವಿರುದ್ಧ ಕೆಲವರು ನಡೆಸಿದ ತಪ್ಪು ಸಂಗತಿಗಳಿಂದಾಗಿ ಭಾರತದ ಇತಿಹಾಸವು ಬ್ರಾಹ್ಮಣರನ್ನು ನಕಾರಾತ್ಮಕವಾಗಿ ಚಿತ್ರಿಸಿದೆ. ಆದರೆ ಇಂದಿನ ದಿನಗಳಲ್ಲಿ ಬ್ರಾಹ್ಮಣರು ನಕಾರಾತ್ಮಕತೆ ಮತ್ತು ಜನಾಂಗೀಯ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಚಲನಚಿತ್ರಗಳಲ್ಲಿ ಹಾಗು ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣರು ಹಾಗು ಅವರ ವೃತ್ತಿಯನ್ನು ಹಾಸ್ಯ ರೂಪದಲ್ಲಿ ತೋರಿಸಲಾಗುತ್ತಿದೆ. ವಿದೇಶಿ ಮಿಷನರಿಗಳು ಹಾಗು ಸಮುದಾಯಗಳು ಅಮಾಯಕ ಭಾರತೀಯರ ಮನಸ್ಸಲ್ಲಿ ದ್ವೇಷವನ್ನು ತುಂಬುತ್ತಿದ್ದು, ಸಾಮಾಜಿಕ ಅಸಮಾನತೆಯನ್ನು ಸೃಷ್ಟಿಸುತ್ತಿದೆ. ಇಂದು ಬ್ರಾಹ್ಮಣರು ಅಲ್ಪಸಂಖ್ಯಾತರಾಗಿದ್ದಾರೆ ಹಾಗು ಭಾರೀ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾವು ಬ್ರಾಹ್ಮಣರಾಗಿ ಬ್ರಾಹ್ಮಣ ಅಟ್ರಾಸಿಟಿ ಆಕ್ಟ್ ಜಾರಿಗೆ ತರಲು ಸುಪ್ರೀಂ ಕೋರ್ಟನ್ನು ಒತ್ತಾಯಿಸುತ್ತಿದ್ದೇವೆ. ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸುವ, ಚಲನಚಿತ್ರಗಳು ಹಾಗು ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣರನ್ನು ಹಾಸ್ಯ ಮಾಡುವ, ನಕಾರಾತ್ಮಕ ಭಾವನೆ ಹರಡುವವರ ವಿರುದ್ಧ ಈ ಆಕ್ಟ್ ನಡಿ ಎಸ್ಸಿ ಎಸ್ಟಿ ಅಟ್ರಾಸಿಟಿ ಆ್ಯಕ್ಟ್ ನಂತೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಮನವಿಯಲ್ಲಿ ತಿಳಿಸಲಾಗಿದೆ.
change.org ನಲ್ಲಿ ಆರಂಭಿಸಲಾದ ಈ ಮನವಿ ಅಭಿಯಾನದ ಲಿಂಕ್ ಈ ಕೆಳಗಿನಂತಿದೆ.
https://www.change.org/p/supreme-court-of-india-raise-against-hate-towards-brahmins?recruiter=647328467&utm_source=share_petition&utm_medium=facebook&utm_campaign=share_for_starters_page&utm_term=des-lg-no_src-no_msg







