ಸರಕಾರದ ಹಿಂದು ವಿರೋಧಿ ನೀತಿ ವಿರೋಧಿಸಿ ಪ್ರತಿಭಟನೆ

ಉಡುಪಿ, ಅ.11: ರಾಜ್ಯ ಸರಕಾರದ ಹಿಂದು ವಿರೋಧಿ ನೀತಿಯನ್ನು ವಿರೋಧಿಸಿ ಹಿಂದು ಜಾಗರಣಾ ವೇದಿಕೆ- ವಿಶ್ವ ಹಿಂದು ಪರಿಷತ್ ಬುಧವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ಹಾಗೂ ಖಂಡನಾ ಸಭೆಯನ್ನು ಹಮ್ಮಿಕೊಂಡಿತ್ತು.
ಹಿಂದು ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆದಿರುವ ಸರಕಾರಿ ಪ್ರಯೋಜಿತ ದಬ್ಬಾಳಿಕೆ, ದೌರ್ಜನ್ಯ ಹಾಗೂ ಕಿರುಕುಳ ಕುರಿತು ಕ್ರಮ ಕೈಗೊಳ್ಳ ಬೇಕು. ಹಿಂದು ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳನ್ನು ಹತ್ತಿಕ್ಕುವ ರಾಜ್ಯ ಸರಕಾರದ ಕೆಲವು ಅಧಿಕಾರಿಗಳ ಅತಿರೇಕರ ವರ್ತನೆ ಕುರಿತು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು.ಮುಸ್ಲಿಮ್ ಮೂಲಭೂತವಾದಿಗಳ ರಾಷ್ಟ್ರ ವಿರೋಧಿ, ಹಿಂದು ವಿರೋಧಿ ಕೃತ್ಯಗಳ ವಿರುದ್ಧ ರಾಜ್ಯ ಸರಕಾರ ಕ್ರಮ ಜರಗಿಸಬೇಕು ಎಂದು ಬಜರಂಗದಳ ಮಂಗಳೂರು ವಿಭಾಗದ ಸಹ ಸಂಚಾಲಕ ಸುನೀಲ್ ಕೆ.ಆರ್. ಒತ್ತಾಯಿಸಿದರು.
ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲ ರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಗೀತಾಂಜಲಿ ಸುವರ್ಣ, ಮುಖಂಡರಾದ ದಿನೇಶ್ ಮೆಂಡನ್, ಸಂತೋಷ್ ಸುವರ್ಣ ಬೊಳ್ಜೆ, ಗಣೇಶ್ ಶೆಣೈ, ಲೋಕೇಶ್ ಶೆಟ್ಟಿಗಾರ್, ಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.





