ದಿಲ್ಲಿಯಲ್ಲಿ ಪಟಾಕಿ ನಿಷೇಧ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪಟಾಕಿ ಮಾರಾಟಗಾರರು

ಹೊಸದಿಲ್ಲಿ, ಅ. 8: ಪಟಾಕಿ ದಾಸ್ತಾನು ಮಾರಾಟಕ್ಕೆ ಪರವಾನಿಗೆ ಕೋರಿ ದಿಲ್ಲಿ ಎನ್‌ಸಿಆರ್‌ನ ಪಟಾಕಿ ವ್ಯಾಪಾರಸ್ಥರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ದಿಲ್ಲಿ ಎನ್‌ಸಿಆರ್‌ನಲ್ಲಿ ದೀಪಾವಳಿ ಸಂದರ್ಭ ಪಟಾಕಿ ಮಾರಾಟ ನಿಷೇಧಿಸಿ ಸುಪ್ರೀಂ ಕೋರ್ಟ್ ಸೋಮವಾರ ಆದೇಶ ನೀಡಿತ್ತು. ದಿಲ್ಲಿ ಎನ್‌ಸಿಆರ್‌ನಲ್ಲಿ ಪಟಾಕಿ ಮಾರಾಟ ನಿಷೇಧದ ಕಳೆದ ವರ್ಷದ ಆದೇಶವನ್ನು ಸುಪ್ರೀಂ ಕೋರ್ಟ್ ಮರು ಜಾರಿಗೊಳಿಸುವಂತೆ ಆಗ್ರಹಿಸಿ ಸಲ್ಲಿಸಲಾದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಸಕ್ರಿ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ.
ಪಟಾಕಿ ಸಣ್ಣ ಹಾಗೂ ದೊಡ್ಡ ವ್ಯಾಪಾರಸ್ಥರು ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಅಸಮಾಧಾನಗೊಂಡಿದ್ದಾರೆ. ದೇಶದಲ್ಲಿ ಮಾರಾಟವಾಗುವ ಶೇ. 85 ಪಟಾಕಿ ತಮಿಳುನಾಡಿನ ಪುಟ್ಟ ಪಟ್ಟಣದಲ್ಲಿ ಉತ್ಪಾದನೆಯಾಗುತ್ತದೆ. ಸುಪ್ರೀಂ ಕೋರ್ಟ್‌ನ ತೀರ್ಪು ಉತ್ಪಾದಕರು ಹಾಗೂ ಸಗಟು ಮಾರಾಟಗಾರರಿಗೆ ಆಘಾತ ಉಂಟು ಮಾಡಿದೆ. ಇತರ ರಾಜ್ಯಗಳು ಕೂಡ ಇದೇ ರೀತಿ ಪಟಾಕಿ ನಿಷೇಧಿಸಿದರೆ, ಪಟಾಕಿ ವ್ಯವಹಾರಕ್ಕೆ ದೊಡ್ಡ ಮಟ್ಟದ ನಷ್ಟ ಆಗಲಿದೆ ಎನ್ನಲಾಗಿದೆ.
ಪಟಾಕಿ ನಿಷೇಧದಲ್ಲಿ ರಾಜಕೀಯ: ತ್ರಿಪುರಾ ರಾಜ್ಯಪಾಲ ಅಗರ್ತಲಾ:
ಸುಪ್ರೀಂ ಕೋರ್ಟ್ ದಿಲ್ಲಿ ಎನ್‌ಸಿಆರ್‌ನಲ್ಲಿ ಪಟಾಕಿ ಮಾರಾಟ ನಿಷೇಧಿಸಿ ನೀಡಿದ ತೀರ್ಪಿನ ಹಿನ್ನಲೆಯಲ್ಲಿ ರಾಜಕೀಯ ಇದೆ ಎಂದು ತ್ರಿಪುರಾ ಗವರ್ನರ್ ತಥಾಗತ ರಾಯ್ ಹೇಳಿದ್ದಾರೆ.







