ಪ್ರತ್ಯಕ್ಷ ತೆರಿಗೆ ಸಂಗ್ರಹ ಶೇ.15.8ರಷ್ಟು ಹೆಚ್ಚಳ

ಹೊಸದಿಲ್ಲಿ, ಅ.11: ಎಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಪ್ರತ್ಯಕ್ಷ ತೆರಿಗೆ ಪ್ರಮಾಣದಲ್ಲಿ ಶೇ.15.8ರಷ್ಟು ಹೆಚ್ಚಳವಾಗಿದ್ದು 3.86 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ವಿತ್ತ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 2017ರ ಸೆಪ್ಟೆಂಬರ್‌ವರೆಗಿನ ತಾತ್ಕಾಲಿಕ ಅಂಕಿಅಂಶದ ಪ್ರಕಾರ ನಿವ್ವಳ ಸಂಗ್ರಹವು 3.86 ಲಕ್ಷ ಕೋಟಿ ರೂ. ಆಗಿದ್ದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.15.8ರಷ್ಟು ಹೆಚ್ಚಳವಾಗಿರುತ್ತದೆ ಎಂದು ವಿತ್ತ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಮುಂಗಡ ತೆರಿಗೆ ಸಂಗ್ರಹ 1.77 ಲಕ್ಷ ಕೋಟಿ ರೂ. ಆಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇ.11.5ರಷ್ಟು ಹೆಚ್ಚಳವಾಗಿದೆ. ಕಾರ್ಪೊರೇಟ್ ಆದಾಯ ತೆರಿಗೆ (ಸಿಐಟಿ) ಮುಂಗಡ ತೆರಿಗೆಯಲ್ಲಿ ಶೇ.8.1ರಷ್ಟು ಹೆಚ್ಚಳವಾಗಿದ್ದರೆ ವೈಯಕ್ತಿಕ ಆದಾಯ ತೆರಿಗೆ(ಪಿಐಟಿ) ಮುಂಗಡ ತೆರಿಗೆಯಲ್ಲಿ ಶೇ.30.1ರಷ್ಟು ಹೆಚ್ಚಳವಾಗಿದೆ. ಎಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 79,660 ಕೋಟಿ ರೂ. ಮೊತ್ತದ ತೆರಿಗೆ ಮರುಪಾವತಿಸಲಾಗಿದೆ. ಇದೇ ಅವಧಿಯಲ್ಲಿ ಒಟ್ಟಾರೆ ಪ್ರತ್ಯಕ್ಷ ತೆರಿಗೆ ಸಂಗ್ರಹ(ಮರುಪಾವತಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೊದಲು)ದಲ್ಲಿ ಶೇ.10.3ರಷ್ಟು ಹೆಚ್ಚಳವಾಗಿದ್ದು 4.66 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಸಚಿವಾಲಯ ತಿಳಿಸಿದೆ.





