ನ.1ರಿಂದ 'ಸವಿರುಚಿ ಸಂಚಾರಿ ಕ್ಯಾಂಟೀನ್' ಆರಂಭ: ಭಾರತಿ ಶಂಕರ್
ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಿಗೆ ಸಿಹಿ ಸುದ್ದಿ
ಬೆಂಗಳೂರು, ಅ.11: 2017-18ನೆ ಸಾಲಿನ ಬಜೆಟ್‌ನಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಜಿಲ್ಲಾ ಒಕ್ಕೂಟಗಳಿಗಾಗಿ ಘೋಷಿಸಿರುವ ಸವಿರುಚಿ ಸಂಚಾರಿ ಕ್ಯಾಂಟೀನ್ ಅನ್ನು ಪ್ರಾಯೋಗಿಕವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ನ.1ರಿಂದ ಪ್ರಾರಂಭಿಸಲಾಗುವುದು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ತಿಳಿಸಿದ್ದಾರೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಸ್ತ್ರೀಶಕ್ತಿ ಒಕ್ಕೂಟಗಳಿಗೆ ಪೂರ್ವಭಾವಿ ಸಿದ್ಧತೆ ಹಾಗೂ ಯೋಜನಾ ಅನುಷ್ಠಾನ ಕುರಿತು ಅ.9 ರಿಂದ ನಡೆಯುತ್ತಿರುವ ಮೂರು ದಿನಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು ಅವರು, ಸವಿರುಚಿ ಸಂಚಾರಿ ಕ್ಯಾಂಟೀನ್ ಅನ್ನು ಪ್ರಾರಂಭಿಸಿ, ಮುನ್ನಡೆಸಲು ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ಸಂಪನ್ಮೂಲ ವ್ಯಕ್ತಿಗಳಿಂದ ಅಗತ್ಯ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಮಹಿಳೆಯರಲ್ಲಿ ಉದ್ಯಮ, ಸಾಹಸ ಮನೋಭಾವನೆಯನ್ನು ಬೆಳೆಸಲು, ಆಹಾರ ಮತ್ತು ಪೋಷಕಾಂಶಗಳು, ಅಡುಗೆ ತಯಾರಿಸುವ ವಿಧಾನಗಳು, ಕಾರ್ಯತಂತ್ರಗಳು, ನೈರ್ಮಲ್ಯ ಹಾಗೂ ಆರೋಗ್ಯ ಸುರಕ್ಷತೆ, ಲೆಕ್ಕಪತ್ರ ನಿರ್ವಹಣೆ, ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವ ತಂತ್ರಗಳ ಬಗ್ಗೆ ಕಾರ್ಯಾಗಾರದಲ್ಲಿ ಹೆಚ್ಚಿನ ಒತ್ತನ್ನು ನೀಡಲಾಗಿದೆ ಎಂದರು.
ಬಜೆಟ್‌ನಲ್ಲಿ ಮೂರು ಕೋಟಿ ರೂ.ಗಳನ್ನು ನೀಡಲಾಗಿದ್ದು, ಪ್ರತಿ ಜಿಲ್ಲಾ ಒಕ್ಕೂಟಕ್ಕೆ ತಲಾ 10 ಲಕ್ಷ ರೂ.ಗಳ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ಇದರಲ್ಲಿ ವಾಹನ, ಅಡುಗೆ ಪರಿಕರ ಹಾಗೂ ಆಹಾರ ಧಾನ್ಯಗಳನ್ನು ಖರೀದಿಸುವ ಜೊತೆಯಲ್ಲಿ ನಿಭಾಯಿಸಿಕೊಂಡು ಹೋಗಲು ಅವಶ್ಯವಿರುವ ಇತರೆ ಖರ್ಚುಗಳನ್ನು ಈ ಹಣದಲ್ಲೆ ಸರಿದೂಗಿಸಿಕೊಳ್ಳಬೇಕು. ಈಗಾಗಲೇ ಹೆಚ್ಚಿನ ಬೇಡಿಕೆ ಇದ್ದು ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೆ ಒಂದರಂತೆ ಕ್ಯಾಂಟಿನ್ ತೆರೆಯುವ ಕುರಿತು ಮುಖ್ಯಮಂತ್ರಿಗೆ ಬೇಡಿಕೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟಗಳು ನಾಲ್ಕುವರೆ ವರ್ಷಗಳಲ್ಲಿ ಪ್ರತಿತಿಂಗಳಿಗೆ 18,500 ರೂ.ಗಳಂತೆ ಕಂತಿನಲ್ಲಿ ಹಣವನ್ನು ಹಿಂದಿರುಗಿಸಬೇಕಾಗಿದ್ದು ಬಡ್ಡಿರಹಿತ ಸಾಲವಾಗಿರುತ್ತದೆ. ಮಹಿಳೆಯರು ಆಯಾ ಪ್ರಾದೇಶಿಕತೆಗೆ ಅನುಗುಣವಾಗಿ ಆಹಾರಗಳನ್ನು ತಯಾರಿಸಿ ಮಾರಬಹುದು ಹಾಗೂ ಸಂಚಾರಿ ವಾಹನದಲ್ಲಿ ಸ್ವಸಹಾಯ ಸಂಘಗಳಲ್ಲಿ ತಯಾರಿಸಿರುವ ಗುಡಿ ಕೈಗಾರಿಕೆ ವಸ್ತುಗಳನ್ನು ಮಾರಾಟ ಮಾಡಬಹುದು. ಈ ಯೋಜನೆಯ ಮುಖ್ಯ ಉದ್ದೇಶ ಮಹಿಳೆಯರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿಸುವುದು ಎಂದು ಹೇಳಿದರು.
ಪ್ರಸ್ತುತ ಪ್ರತಿಜಿಲ್ಲೆಗೊಂದು ಸವಿರುಚಿ ಸಂಚಾರಿ ಕ್ಯಾಂಟೀನ್‌ಗಳನ್ನು ತೆರೆಯಲಾಗುತ್ತಿದ್ದು, ನ.19ರಂದು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಸಮಾರಂಭದಲ್ಲಿ ಮುಖ್ಯಮಂತ್ರಿ ಈ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪಂಕಜಾ, ಉಪ ನಿರ್ದೇಶಕ ನಾರಾಯಣಸ್ವಾಮಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







