ಬೆಂಗಳೂರು ಕೇಂದ್ರ ವಿವಿಗೆ ಅನುದಾನ ಬಿಡುಗಡೆ ಮಾಡಲು ಆಗ್ರಹ
ಬೆಂಗಳೂರು, ಅ.11: ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯದ ಅಭಿವೃದ್ಧಿ ಮತ್ತು ನೂತನ ಕೋರ್ಸ್‌ಗಳನ್ನು ಆರಂಭಿಸಲು 873 ಕೋಟಿ ರೂ. ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದ್ದು, ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಕುಲಪತಿ ಪ್ರೊ.ಜಾಫೆಟ್ ಆಗ್ರಹಿಸಿದ್ದಾರೆ.
ಬುಧವಾರ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಕರಡು ಮನ್ನೋಟ ಮತ್ತು ಕ್ರಿಯಾ ಯೋಜನೆಯನ್ನು ಪ್ರಕಟಿಸಿದ ಬಳಿಕ ಮಾತನಾಡಿದ ಅವರು, ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯವನ್ನು ಸ್ಥಳೀಯ ವಿಷಯಕ್ಕೆ ಆದ್ಯತೆ ನೀಡಿ, ವಿಶ್ವದರ್ಜೆಯ ವಿಶ್ವವಿದ್ಯಾನಿಲಯವಾಗಿ ರೂಪಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ವಿವಿಗೆ ಬೇಕಾದ ನೀಲನಕ್ಷೆಯನ್ನು ಸಿದ್ಧಪಡಿಸಿದ್ದೇವೆ. ಸೆಂಟ್ರಲ್ ಕಾಲೇಜು ಆವರಣದ 65 ಎಕರೆ ಜಾಗದಲ್ಲಿ 43 ಎಕರೆ ಜಾಗ ವಿವಿಯ ಅಧೀನಕ್ಕೆ ಬರಲಿದ್ದು, ಸರಕಾರ ಅಧಿಕೃತ ಆದೇಶದ ನಂತರ ಬೆಂಗಳೂರು ವಿವಿಯಿಂದ ಜಮೀನು ವರ್ಗಾವಣೆಯಾಗಲಿದೆ ಎಂದರು.
ಬೆಂಗಳೂರು ವಿಶ್ವವಿದ್ಯಾನಿಲಯದ ತ್ರಿಭಜನೆ ಸಂದರ್ಭದಲ್ಲಿ ಸೂಚಿಸಿರುವಂತೆ ಹೊಸದಾಗಿ ಆರಂಭಿಸುವ ಎರಡು ವಿಶ್ವವಿದ್ಯಾನಿಲಯಕ್ಕೂ ಬೆಂವಿವಿಯಿಂದ ತಲಾ 15 ಕೋಟಿ ನೀಡಲಾಗುತ್ತದೆ. ಅದರಲ್ಲಿ 3 ಕೋಟಿ ಈಗಾಗಲೇ ನೀಡಿದ್ದಾರೆ. 2017-18ನೆ ಸಾಲಿನ ಮಾನ್ಯತೆ ನವೀಕರಣದ 3 ಕೋಟಿ ರೂ. ಬರಲಿದೆ. ಒಟ್ಟಾರೆಯಾಗಿ ಸುಮಾರು 18 ಕೋಟಿ ರೂ. ಸಿಗಲಿದೆ. ಈಗಾಗಲೇ ಬಂದಿರುವ 3 ಕೋಟಿಯಲ್ಲಿ ಸುಮಾರು ಒಂದೂವರೆ ಕೋಟಿ ರೂ. ಸಿಬ್ಬಂದಿ ವೇತನಕ್ಕೆ ನೀಡಿದ್ದೇವೆ ಎಂಬ ಮಾಹಿತಿ ನೀಡಿದರು.
ವಾಣಿಜ್ಯ ಮತ್ತು ವಿಜ್ಞಾನ ವಿಭಾಗ ಸೇರಿ 8 ಸ್ನಾತಕೋತ್ತರ ಕೋರ್ಸ್‌ಗಳು ಬೆಂಗಳೂರು ಕೇಂದ್ರ ವಿವಿಯಲ್ಲಿ ನಡೆಯುತ್ತಿದೆ. ಸುಮಾರು 1500 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಹಂಚಿಕೆ ಇನ್ನೂ ಪೂರ್ಣಗೊಂಡಿಲ್ಲ. ನಮಗೆ 37 ಬೋಧಕ ಹುದ್ದೆಯನ್ನು ಮಂಜೂರು ಮಾಡಿದ್ದಾರೆ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಅಗತ್ಯ ಇನ್ನೂ ಇದೆ ಎಂದರು.
ಹೊಸ ಕೋರ್ಸ್‌ಗಳು: ಬೆಂಗಳೂರು ನಗರದ ವಿಶ್ವವಿದ್ಯಾನಿಲಯವಾಗಿ ರೂಪಿಸುವ ಉದ್ದೇಶದಿಂದ ಮುಂದಿನ ವರ್ಷ ನಗರಾಭಿವೃದ್ಧಿ ಯೋಜನೆಯ ಅಧ್ಯಯನದ ಕೋರ್ಸ್‌ಗಳನ್ನು ಆರಂಭಿಸಲಿದ್ದೇವೆ. ಸಮಾಜ ವಿಜ್ಞಾನ ಶಾಲೆಯಲ್ಲಿ ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಇತ್ಯಾದಿ ವಿಷಯಗಳ ಅಧ್ಯಯನ ಇರಲಿದೆ. ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಶಾಲೆಯಲ್ಲಿ ಕನ್ನಡ, ಇಂಗ್ಲಿಷ್, ವಿದೇಶಿ ಭಾಷೆಗಳ ಅಧ್ಯಯನ ಹಾಗೂ ಕಾನೂನು ಮತ್ತು ಸಾರ್ವಜನಿಕ ನೀತಿ ಶಾಲೆಯಲ್ಲಿ ಕಾನೂನು ಹಾಗೂ ಸಾರ್ವಜನಿಕ ಆಡಳಿತ ವಿಷಯದ ಅಧ್ಯಯನಕ್ಕೆ ಆದ್ಯತೆ ನೀಡಲಿದ್ದೇವೆ. ಇದಕ್ಕಾಗಿ ತಜ್ಞರ ಸಮಿತಿಗಳನ್ನು ರಚನೆ ಮಾಡಿದ್ದೇವೆ ಎಂದು ಹೇಳಿದರು.
ಸಂವಹನ ಶಾಲೆ: ಸಂವಹನ ಶಾಲೆಯನ್ನು ಆರಂಭಿಸಿ, ನೃತ್ಯಕಲೆ ಹಾಗೂ ಸಿನಿಮಾದ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದೇವೆ. ಈ ಸಂಬಂಧ ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಡಾ.ರಾಜೇಂದ್ರ ಸಿಂಗ್ ಬಾಬು ಅವರು ಪ್ರಸ್ತಾವನೆಯೊಂದನ್ನು ಸಲ್ಲಿಸಿದ್ದಾರೆ. ಮುಂದಿನ ವರ್ಷದಿಂದ ಈ ಎಲ್ಲಾ ಕೋರ್ಸ್‌ಗಳನ್ನು ಆರಂಭಿಸಲಿದ್ದೇವೆ. ವಿವಿಯ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸರಕಾರ ತುರ್ತಾಗಿ 25 ಕೋಟಿ ರೂ.ಗಳನ್ನಾದರೂ ಮಂಜೂರು ಮಾಡಬೇಕು ಎಂದು ಬೇಡಿಕೆ ಇಟ್ಟರು.
ನಗರ ವ್ಯಾಪ್ತಿಯಲ್ಲಿ ಸ್ವಲ್ಪ ಜಮೀನು ಕೇಳಿದ್ದೇವೆ. ಬಿಬಿಎಂಪಿ ಆಯುಕ್ತರೊಂದಿಗೆ, ನಗರ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಶೀಘ್ರವೇ ಬಿಡಿಎ ಆಯುಕ್ತರನ್ನು ಭೇಟಿ ಮಾಡಲಿದ್ದೇನೆ. ಅನುದಾನಕ್ಕಾಗಿ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಇನ್ನೊಮ್ಮೆ ಮನವೋಲಿಸಲಾಗುತ್ತದೆ ಎಂದು ಹೇಳಿರು.
ಗೋಷ್ಠಿಯಲ್ಲಿ ಕುಲಸಚಿವ ಡಾ.ತ್ಯಾಗರಾಜ, ಕುಲಸಚಿವ (ವೌಲ್ಯಮಾಪನ)ಡಾ.ಲಿಂಗರಾಜು ಗಾಂಧಿ ಸೇರಿದಂತೆ ಇತರರು ಇದ್ದರು.







