ಬಿಜೆಪಿಯವರ ರಾಜಕೀಯ ಪ್ರೇರಿತ ಸುಳ್ಳು ಆರೋಪ: ಸಿಎಂ ಸಿದ್ದರಾಮಯ್ಯ
ಡಿನೋಟಿಫೈ ಪ್ರಕರಣ
ಬೆಂಗಳೂರು, ಅ.11: ನಾನು ಯಾವುದೇ ಡಿನೋಟಿಫೈ ಮಾಡಿಲ್ಲ ಎಂದು ಪುನರುಚ್ಛರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿ ನನ್ನ ತೇಜೋವಧೆ ಮಾಡಲು ಬಿಜೆಪಿಯವರು ಮಾಡಿರುವ ಆರೋಪ ರಾಜಕೀಯ ಪ್ರೇರಿತ ಎಂದು ಸ್ಪಷ್ಟಡಿಸಿದ್ದಾರೆ.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ಇರುವವರು ಸಿಲ್ಲಿ ಸಿಲ್ಲಿಯಾಗಿ ಮಾತನಾಡಬಾರದು. ಸುಳ್ಳು ಹೇಳುವುದಕ್ಕೂ ಒಂದು ಇತಿ ಮಿತಿ ಇರಬೇಕು. ಮಂತ್ರಿಯಾಗಿ ಕೆಲಸ ಮಾಡಿರುವ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿಗೆ ಬುದ್ಧಿ ಇಲ್ಲ ಎಂದು ಕಿಡಿಕಾರಿದರು.
ಭೂಪಸಂದ್ರದ ಸರ್ವೇ ನಂ. 20,21ರಲ್ಲಿ 3.34 ಎಕರೆ ಭೂಮಿಯನ್ನು ಮುಖ್ಯಮಂತ್ರಿ ಡಿನೋಟಿಫೈ ಮಾಡಿದ್ದಾರೆ ಎಂದು ಪುಟ್ಟಸ್ವಾಮಿ ಆರೋಪ ನಿರಾಧಾರ. ಡಿನೊಟಿಫಿಕೇಶನ್ ಆಗಬೇಕಾದರೆ ಹಲವು ಪ್ರಕ್ರಿಯೆಗಳಿವೆ. ಸೆಕ್ಷನ್ 48ರ ಪ್ರಕಾರ ಡಿನೋಟಿಫಿಕೇಶನ್ ಮಾಡಬಹುದು. ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಡಿನೋಟಿಫಿಕೇಶನ್ ಮಾಡಲು ಒಂದು ಸಮಿತಿ ಇದೆ. ಆ ಸಮಿತಿ ಒಪ್ಪಿಗೆ ಆಗಬೇಕು. ಆದರೆ ಸಮಿತಿ ಮುಂದೆ ಡಿನೋಟಿಫಿಕೇಶನ್ ಮನವಿ ಹೋಗಿಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಶಾಂತ ಇಂಡಸ್ಟ್ರೀಸ್ ಜೊತೆ ಸಂಬಂಧವಿಲ್ಲ: ನನ್ನ ಮಗನಿಗೂ ಶಾಂತ ಇಂಡಸ್ಟ್ರೀಸ್ ಸಂಸ್ಥೆಗೂ ಸಂಬಂಧ ಇಲ್ಲ. ಮ್ಯಾಟಿಕ್ ಸಲ್ಯೂಷನ್‌ನಲ್ಲಿ ನನ್ನ ಮಗ ನಿರ್ದೇಶಕನಾಗಿದ್ದ. ವಿಕ್ಟೋರಿಯ ಆಸ್ಪತ್ರೆಯಲ್ಲಿ ಲ್ಯಾಬ್ ಹೊಂದಿದ್ದ ಅನ್ನೋ ಕಾರಣಕ್ಕೆ ಸಂಸ್ಥೆಗೆ ರಾಜೀನಾಮೆ ನೀಡಿದ್ದ. ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಎಚ್ಚರಿಕೆ: ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಮಾಯಕೊಂಡ ಶಾಸಕ ಶಿವಮೂರ್ತಿ ನಾಯಕ್ ಜೊತೆ ಮಾತನಾಡಿದ್ದೇನೆ. ಈ ತರ ಮಾತನಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದೇನೆ ಎಂದು ಹೇಳಿದರು.







