'ಮುಖ್ಯಮಂತ್ರಿ ಅನಿಲ ಭಾಗ್ಯ' ಯೋಜನೆಗೆ ಒಪ್ಪಿಗೆ: ಸಚಿವ ಜಯಚಂದ್ರ

ಬೆಂಗಳೂರು, ಅ.11: ಕೇಂದ್ರದ ‘ಉಜ್ವಲ ಯೋಜನೆ’ಯಿಂದ ಹೊರಗುಳಿದ ಫಲಾನುಭವಿಗಳಿಗೆ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಯಡಿ 4,040 ರೂ.ವೆಚ್ಚದಲ್ಲಿ ಸ್ಟೌವ್ ಸಹಿತ ಗ್ಯಾಸ್ ಸಿಲಿಂಡರ್ ಒದಗಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಸಚಿವ ಜಯಚಂದ್ರ, ರಾಜ್ಯದಲ್ಲಿ 28 ಲಕ್ಷ ಫಲಾನುಭವಿ ಕುಟುಂಬಗಳು ಒಳಪಡುವ ಈ ಯೋಜನೆಯ ಸೌಲಭ್ಯವನ್ನು 2018ರ ಮಾರ್ಚ್ ಅಂತ್ಯದೊಳಗೆ 10 ಲಕ್ಷ ಫಲಾನುಭಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ. ಇದಕ್ಕಾಗಿ ಈ ಯೋಜನೆಗೆ 1,137 ಕೋಟಿ ರೂ.ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದರು.
ಪುನರ್ಬೆಳಕು: ಅದೇ ರೀತಿ ರಾಜ್ಯದಲ್ಲಿ ಸೀಮೆಎಣ್ಣೆ ಬಳಕೆ ಮಾಡುವ ಬಿಪಿಎಲ್ ಕುಟುಂಬಗಳಿಗೆ ಉಚಿತ ವಿದ್ಯುತ್ ರಿಚಾರ್ಜಬಲ್ ಎಲ್‌ಇಡಿ ಬಲ್ಬ್ ವಿತರಣೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಆ ಯೋಜನೆಗೆ ‘ಪುನರ್ಬೆಳಕು’ ಎಂದು ಹೆಸರಿಡಲಾಗಿದೆ ಎಂದರು.
ಸಂಯೋಜಕರಿಗೆ ಗೌರವ ಧನ: ನ್ಯಾಯಬೆಲೆ ಅಂಗಡಿ ಹಂತದಲ್ಲಿ ಜಾಗೃತಿ ಸಮಿತಿಗಳ ಮೂಲಕ ನ್ಯಾಯಬೆಲೆ ಅಂಗಡಿಗಳ ಕಾರ್ಯ ನಿರ್ವಹಣೆಯ ಸಾಮಾಜಿಕ ಪರಿಶೋಧನೆಗೆ ತರಬೇತಿಯಲ್ಲಿ ಪಾಲ್ಗೊಳ್ಳುವ ತಾಲೂಕು ಸಂಯೋಜಕರಿಗೆ 150ರೂ. ಹಾಗೂ ಗ್ರಾಮ ಸಂಯೋಜಕರಿಗೆ 75ರೂ. ಗೌರವ ಧನ ನೀಡುವ ಆದೇಶಕ್ಕೆ ಕೆಲ ಮಾರ್ಪಾಡಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಲೇಖನ ಸಾಮಗ್ರಿಗೆ ಒಪ್ಪಿಗೆ: ಸರಕಾರಿ, ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ 40,765 ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಎಂಎಸ್‌ಐಎಲ್ ಮೂಲಕ ಲೇಖನ ಸಾಮಗ್ರಿಗಳನ್ನು ಖರೀದಿಸಿ ವಿತರಿಸಲು ಸಂಪುಟ ಒಪ್ಪಿಗೆ ನೀಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೇ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ‘ಶೂ-ಸಾಕ್ಸ್, ಟೂಲ್ ಕಿಟ್’ನ್ನು ಉಚಿತವಾಗಿ ವಿತರಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ರಾಜ್ಯದ 46 ಸರಕಾರಿ ಐಟಿಐ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲು 20.27ಕೋಟಿ ರೂ.ಅಂದಾಜು ವೆಚ್ಚದಲ್ಲಿ 26 ವಿವಿಧ ಮೆಕ್ಯಾನಿಕಲ್ ಉಪಕರಣಗಳನ್ನು ಖರೀದಿಸಲು ಹಾಗೂ 46 ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 16.30ಕೋಟಿ ರೂ. ವೆಚ್ಚದಲ್ಲಿ 127 ವಿದ್ಯುತ್ ಮತ್ತು ವಿದ್ಯುನ್ಮಾನ ಉಪಕರಣಗಳನ್ನು ಖರೀದಿಸಲು ಸಚಿವ ಸಂಪುಟ ಸಮ್ಮತಿಸಿದೆ ಎಂದರು.
ವಿಜಯಪುರ ಮಹಾನಗರ ಪಾಲಿಕೆಯ ಮಾಸ್ಟರ್ ಪ್ಲಾನ್ ಅನ್ವಯ ಅದರ ವ್ಯಾಪ್ತಿಯಲ್ಲಿ ಕೈಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿಗಳಲ್ಲಿ ಭೂ ಸ್ವಾಧೀನಪಡಿಸಿಕೊಂಡಿರುವ ಆಸ್ತಿಗಳ ಮಾಲಕರಿಗೆ ನೂತನ ಮಾರ್ಗಸೂಚಿಯನ್ವಯ ಪರಿಹಾರ ನೀಡಲು ಸಂಪುಟ ಸಮ್ಮತಿಸಿ ಸೂಚಿಸಿದೆ.
ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕಾಕರಾಮನಹಳ್ಳಿ, ಬೋರೆಹಳ್ಳಿ ಮತ್ತು ಕರೇನಹಳ್ಳಿ ಗ್ರಾಮದಲ್ಲಿ ಗೃಹ ಮಂಡಳಿ ವಸತಿ ಯೋಜನೆಗಾಗಿ ಭೂ ಸ್ವಾಧೀನ ಪಡಿಸಿಕೊಂಡ ಜಮೀನಿನ ಮಾಲಕರಿಗೆ ಸಾಂತ್ವನ ನಿವೇಶನ ನೀಡುವ ಯೋಜನೆಗೆ ಸಚಿವ ಸಂಪುಟ ಸಮ್ಮತಿಸಿದೆ ಎಂದು ಸಚಿವ ಜಯಚಂದ್ರ ತಿಳಿಸಿದರು.
ಮೂಡಲಗಿಗೆ ಕೊನೆಗೂ ತಾಲೂಕು ಭಾಗ್ಯ: ಹೊಸ ತಾಲೂಕುಗಳ ಪಟ್ಟಿಯಿಂದ ಕೈಬಿಡಲಾಗಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮೂಡಲಗಿ ಪಟ್ಟಣಕ್ಕೆ ‘ತಾಲೂಕು ಭಾಗ್ಯ’ ಕಲ್ಪಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
-ಟಿ.ಬಿ.ಜಯಚಂದ್ರ, ಕಾನೂನು ಸಚಿವ
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾಗೆ ಶಾಸಕ ಕೆ.ಶಿವಮೂರ್ತಿ ಬೆದರಿಕೆ ಹಾಕಿದ್ದಾರೆನ್ನಲಾದ ಪ್ರಕರಣ ಸಂಬಂಧ ಶಾಸಕರ ವಿರುದ್ಧ ಪೊಲೀಸರಿಗೆ ದೂರು ನೀಡಲಿ. ಆ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡುವೆ.
-ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ







