ಭಾರತ ವಿರೋಧಿ ಪ್ರತಿಭಟನೆ ಮಾಡಿದ ರಾಜಪಕ್ಸೆ ಮಗನ ಬಂಧನ

ಕೊಲಂಬೊ, ಅ. 11: ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹೀಂದ ರಾಜಪಕ್ಸೆ ಅವರ ಹೆಸರು ಹೊಂದಿರುವ ವಿಮಾನ ನಿಲ್ದಾಣವೊಂದನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂಸಾತ್ಮಕವಾಗಿ ನಡೆದ ಭಾರತ ವಿರೋಧಿ ಪ್ರತಿಭಟನೆಯ ನೇತೃತ್ವ ವಹಿಸಿದ ಅವರ ಪುತ್ರನನ್ನು ಶ್ರೀಲಂಕಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ದಕ್ಷಿಣದ ಪಟ್ಟಣ ಹಂಬನ್‌ಟೋಟದಲ್ಲಿರುವ ಭಾರತೀಯ ಕಾನ್ಸುಲೇಟ್‌ನ ಹೊರಗಡೆ ಶುಕ್ರವಾರ ಅಕ್ರಮ ಕೂಟ ಸೇರಿದ ಗುಂಪಿನ ನೇತೃತ್ವ ವಹಿಸಿರುವುದಕ್ಕಾಗಿ ಸಂಸದ ನಮಲ್ ರಾಜಪಕ್ಸೆ ಅವರನ್ನು ಬಂಧಿಸಲಾಯಿತು ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು.
ರಸ್ತೆಗಿಳಿದು ಪ್ರತಿಭಟನೆ ಮಾಡಬಾರದು ಎಂಬ ನ್ಯಾಯಾಲಯದ ಆದೇಶವನ್ನು ಅವರು ಉಲ್ಲಂಘಿಸಿದ್ದಾರೆ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ ಎಂದು ಪೊಲೀಸ್ ಸುಪರಿಂಟೆಂಡೆಂಟ್ ತಿಳಿಸಿದರು.
ತನ್ನ ತಂದೆಯ ಹೆಸರು ಹೊಂದಿರುವ ವಿಮಾನ ನಿಲ್ದಾಣವನ್ನು ಅತ್ಯಂತ ಕಡಿಮೆ ಬೆಲೆಗೆ ಭಾರತೀಯ ಕಂಪೆನಿಯೊಂದಕ್ಕೆ ಮಾರಾಟ ಮಾಡಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಅವರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು ಎನ್ನಲಾಗಿದೆ.







