ದೇಶದ ದುಸ್ಥಿತಿಗೆ ಮೇಲ್ವರ್ಗಗಳೇ ಕಾರಣ: ಪ್ರೊ.ಚಂಪಾ

ಬೆಂಗಳೂರು, ಅ.11: ಸಾವಿರಾರು ವರ್ಷಗಳಿಂದಲೂ ದೇಶದಲ್ಲಾಗುತ್ತಿರುವ ಎಲ್ಲ ದುಸ್ಥಿತಿಗೆ ಮೇಲ್ವರ್ಗಗಳೇ ಕಾರಣರೆಂದು ಸಮಾಜವಾದಿ ಮುಖಂಡ ಲೋಹಿಯಾ ಯಾವಾಗಲೂ ಹೇಳುತ್ತಿದ್ದರು. ಈಗ ಅವರ ಮಾತು ಅಕ್ಷರಶಃ ನಿಜವಾಗುತ್ತಿರುವುದನ್ನು ಕಣ್ಣಾರೆ ನೀಡುತ್ತಿದ್ದೇವೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ತಿಳಿಸಿದ್ದಾರೆ.
ಬುಧವಾರ ಭಾರತಯಾತ್ರಾ ಕೇಂದ್ರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್‌ಗೆ ಜಯಪ್ರಕಾಶ್ ನಾರಾಯಣ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕಾಶ್ಮೀರದ ಬ್ರಾಹ್ಮಣ ಸಮುದಾಯದ ನೆಹರೂ ದೇಶದ ಮೊದಲ ಪ್ರಧಾನಿಯಾಗುವ ಮೂಲಕ ಸ್ವಾತಂತ್ರಾ ನಂತರದ ಭಾರತದಲ್ಲಿ ಅನಾದಿ ಕಾಲದಿಂದಲೂ ಬೀಡುಬಿಟ್ಟಿದ್ದ ಸಮಸ್ಯೆಗಳು ಹಾಗೆಯೇ ಮುಂದುವರೆದಿವೆ ಎಂದು ವಿಷಾದಿಸಿದರು.
ದೇಶಕ್ಕೆ ಮೊದಲ ಪ್ರಧಾನಿಯಾಗಿ ನೆಹರೂ ಆಗದೆ ಮಹಾತ್ಮ ಗಾಂಧೀಜಿ ಆಗಿದ್ದರೆ ಅನಾದಿ ಕಾಲದಿಂದಲೂ ಕಾಡುತ್ತಿದ್ದ ಹಲವು ಸಮಸ್ಯೆಗಳು ನಿರ್ಮೂಲನೆ ಆಗುತ್ತಿತ್ತು. ಅದೇ ರೀತಿಯಲ್ಲಿ ತುರ್ತು ಪರಿಸ್ಥಿತಿಯ ನಂತರ ಜಯಪ್ರಕಾಶ್ ನಾರಾಯಣ್ ದೇಶದ ಪ್ರಧಾನಿಯಾಗಿದ್ದರೆ ಆಧುನಿಕ ಭಾರತ ಆಮೂಲಾಗ್ರವಾಗಿ ನಿರ್ಮಾಣವಾಗುತ್ತಿತ್ತು. ಆದರೆ, ಎಲ್ಲ ಕಾಲದಲ್ಲೂ ಮೇಲ್ವರ್ಗಗಳೇ ದೇಶದಲ್ಲಿ ಆಳ್ವಿಕೆ ನಡೆಸುವ ಮೂಲಕ ದೇಶದಲ್ಲಿ ನಡೆಯುತ್ತಿರುವ ಎಲ್ಲ ಅನಾಹುತಗಳಿಗೆ ಕಾರಣಕರ್ತರಾಗಿದ್ದಾರೆ ಎಂದು ಅವರು ಹೇಳಿದರು.
ಸರ್ವಾಧಿಕಾರಿಗಳಿಗೆ ಉಳಿಗಾಲವಿಲ್ಲ: ಅಧಿಕಾರದ ಕಡು ವ್ಯಾಮೋಹಿಗಳು, ಚಪಲ ಹೊಂದಿರುವವರು ಮಾತ್ರ ಸರ್ವಾಧಿಕಾರಿಗಳಾಗಿ ರೂಪುಗೊಳ್ಳುತ್ತಾರೆ. ಈಗಾಗಲೇ ಜಗತ್ತಿನ ಹಲವೆಡೆ ಸರ್ವಾಧಿಕಾರಿ ಆಳ್ವಿಕೆಯನ್ನು ಜನತೆ ತಮ್ಮ ಹೋರಾಟಗಳ ಮೂಲಕ ಮಣ್ಣು ಮುಕ್ಕಿಸಿದ್ದಾರೆ. ಇದೇ ರೀತಿಯಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಜೋಪಾನವಾಗಿ ಕಾಯುವುದು ನಮ್ಮೆಲ್ಲರ ಕರ್ತವ್ಯವೆಂದು ಚಂಪಾ ಹೇಳಿದರು.
ರಾಜಕೀಯ ಸ್ವಚ್ಛತೆ: ಜನತೆಯ ಪಾಪವನ್ನು ತೊಳೆಯಬೇಕಾಗಿದ್ದ ಗಂಗಾ ನದಿ ಇವತ್ತು ಪಾಚಿ ತುಂಬಿಕೊಂಡು ಕೊಳೆತು ನಾರುತ್ತಿದೆ. ಅಲ್ಲಿ ಸ್ನಾನ ಮಾಡಲು ಸಾಧು ಸಂತರೇ ಹಿಂಜರಿಯುತ್ತಿದ್ದಾರೆ. ಅದೇ ರೀತಿಯಲ್ಲಿಯೇ ದೇಶದ ಎಲ್ಲ ಪ್ರಮುಖ ನಗರಗಳು ಕಸ ತುಂಬಿಕೊಂಡು ನಾರುತ್ತಿವೆ. ಈ ಬಗ್ಗೆ ಕಿಂಚಿತ್ತೂ ಗಮನ ಕೊಡದ ಜನಪ್ರತಿನಿಧಿಗಳನ್ನು ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳಿಸುವ ಮೂಲಕ ರಾಜಕೀಯ ಸ್ವಚ್ಛತೆಗೆ ಆದ್ಯತೆ ಕೊಡೋಣ. ಆಗ ತಾನಾಗಿಯೇ ಎಲ್ಲ ನಗರಗಳು ಸ್ವಚ್ಛವಾಗುತ್ತದೆ ಎಂದು ಅವರು ಅಭಿಪ್ರಾಯಿಸಿದರು.
ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಮಾತನಾಡಿ, ಇವತ್ತು ಪ್ರಧಾನಿ ನರೇಂದ್ರ ಮೋದಿ ದೇಶದ ಸ್ವಚ್ಛತೆಗೆ ಕೋಟ್ಯಂತರ ರೂ.ವ್ಯಯಿಸುತ್ತಿದ್ದಾರೆ. ಆದರೆ, ನಿಜವಾಗಿ ಸ್ವಚ್ಛತೆಯ ಬಗ್ಗೆ ಮಾತನಾಡಿ, ಮಾತನಾಡಿದಂತೆಯೇ ಬದುಕಿದವರು ಜಯಪ್ರಕಾಶ್ ನಾರಾಯಣ್. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು ಎಂದು ಸ್ಮರಿಸಿದರು.
ಈ ವೇಳೆ ಹಿರಿಯ ರಂಗಭೂಮಿ ಕಲಾವಿದರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಹುಚ್ಚಪ್ಪ, ಮಾಜಿ ಪಾಲಿಕೆ ಸದಸ್ಯ ಜಗದೀಶ್ ರೆಡ್ಡಿ, ಹಿರಿಯ ರಂಗಭೂಮಿ ಕಲಾವಿದೆ ಪ್ರತಿಭಾ ನಾರಾಯಣ್, ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ ಮತ್ತಿತರರಿದ್ದರು.
ಅಧಿಕಾರದ ಕಡು ವ್ಯಾಮೋಹಿಗಳು, ಚಪಲ ಹೊಂದಿರುವವರು ಮಾತ್ರ ಸರ್ವಾಧಿಕಾರಿಗಳಾಗಿ ರೂಪುಗೊಳ್ಳುತ್ತಾರೆ. ಈಗಾಗಲೇ ಜಗತ್ತಿನ ಹಲವೆಡೆ ಸರ್ವಾಧಿಕಾರಿ ಆಳ್ವಿಕೆಯನ್ನು ಜನತೆ ತಮ್ಮ ಹೋರಾಟಗಳ ಮೂಲಕ ಮಣ್ಣು ಮುಕ್ಕಿಸಿದ್ದಾರೆ. ಇದೇ ರೀತಿಯಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಜೋಪಾನವಾಗಿ ಕಾಯುವುದು ನಮ್ಮೆಲ್ಲರ ಕರ್ತವ್ಯ.
-ಪ್ರೊ.ಚಂದ್ರಶೇಖರ ಪಾಟೀಲ್, ಹಿರಿಯ ಸಾಹಿತಿ







