ಸಿಆರ್‌ಪಿಎಫ್ ಕೇಂದ್ರ ಕಚೇರಿ ಸ್ಥಳಾಂತರ ಕೇಂದ್ರದ ಮಲತಾಯಿ ಧೋರಣೆ: ಸಚಿವ ರಾಮಲಿಂಗಾರೆಡ್ಡಿ ಟೀಕೆ

ಬೆಂಗಳೂರು, ಅ.11: ಕರ್ನಾಟಕ ರಾಜ್ಯದಲ್ಲಿ ಹಲವು ವರ್ಷಗಳಿಂದ ಇದ್ದ ಸಿಆರ್‌ಪಿಎಫ್ ತುಕಡಿಯನ್ನು ಸ್ಥಳಾಂತರ ಮಾಡಿರುವುದು ಕೇಂದ್ರ ಸರಕಾರದ ಮಲತಾಯಿ ಧೋರಣೆಗೆ ಸಾಕ್ಷಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಆರ್‌ಪಿಎಫ್ ಕೇಂದ್ರ ಕಚೇರಿ ಸ್ಥಳಾಂತರ ಮಾಡುವ ಮುನ್ನ ಕನಿಷ್ಠ ಪಕ್ಷ ರಾಜ್ಯ ಸರಕಾರದ ಗಮನಕ್ಕೆ ತರಬೇಕಿತ್ತು. ಅದನ್ನು ಬಿಟ್ಟು ರಾತ್ರೋರಾತ್ರಿ ಏಕಾಏಕಿ ಕಚೇರಿ ಸ್ಥಳಾಂತರ ಮಾಡಿರುವುದು ತಪ್ಪು ಎಂದು ಆಕ್ಷೇಪಿಸಿದರು.
ಸಿಆರ್‌ಪಿಎಫ್‌ನ ಸ್ಥಾಪನೆ ಮತ್ತು ಸ್ಥಳಾಂತರಕ್ಕೆ ಕೇಂದ್ರ ಗೃಹ ಇಲಾಖೆ ವ್ಯಾಪ್ತಿಯಲ್ಲಿ ಸಮಿತಿಗಳಿರುತ್ತವೆ. ಆ ಸಮಿತಿ ಯಾವ ರೀತಿಯ ವರದಿಯನ್ನು ನೀಡಿದೆ. ಮಾರ್ಗಸೂಚಿಗಳೇನು ಎಂಬುದನ್ನು ಪರಿಶೀಲಿಸಿದ ನಂತರ ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವೆ ಎಂದು ರಾಮಲಿಂಗಾರೆಡ್ಡಿ ಇದೇ ವೇಳೆ ಸ್ಪಷ್ಟಪಡಿಸಿದರು.
Next Story





