ರೇಸ್‌ಕೋರ್ಸ್ ಪರವಾನಿಗೆ ನವೀಕರಣಕ್ಕೆ ಪಟ್ಟು
ಬೆಂಗಳೂರು, ಅ.11: ಪರವಾನಿಗೆ ನವೀಕರಿಸದ ಕಾರಣಕ್ಕೆ ರೇಸ್‌ಕೋರ್ಸ್‌ನ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿದೆ. ಹೀಗಾಗಿ, ರಾಜ್ಯ ಸರಕಾರ ರೇಸ್‌ಕೋರ್ಸ್ ಪರವಾನಿಗೆ ನವೀಕರಣ ಮಾಡಬೇಕೆಂದು ಒತ್ತಾಯಿಸಿ ರೇಸ್‌ಕೋರ್ಸ್‌ನ ನೂರಾರು ಗುತ್ತಿಗೆ ಸಿಬ್ಬಂದಿ ಪ್ರತಿಭಟನೆ ನಡೆಸಿದರು.
ಬುಧವಾರ ರೇಸ್‌ಕೋರ್ಸ್ ಮುಂಭಾಗ ಪ್ರತಿಭಟನೆ ನಡೆಸಿದ ಸಿಬ್ಬಂದಿ, ಪರವಾನಿಗೆ ನವೀಕರಿಸದ ಕಾರಣಕ್ಕೆ ರೇಸ್‌ಕೋರ್ಸ್‌ನ ಕಾರ್ಯಚಟುವಟಿಕೆಗಳು 45 ದಿನಗಳಿಂದ ಸ್ಥಗಿತಗೊಂಡಿವೆ. ಹೀಗಾಗಿ, ಸುಮಾರು 1,500 ಗುತ್ತಿಗೆ ಕಾರ್ಮಿಕರನ್ನು ತಾತ್ಕಾಲಿಕವಾಗಿ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ಸಿಬ್ಬಂದಿ ರಾಜೇಶ್ ಎಂಬುವರು ಮಾತನಾಡಿ, ಪರವಾನಿಗೆ ಕೋರಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದೇವೆ. ರೇಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಕ್ವೀನ್ ಲತೀಫಾ ಕುದುರೆಗೆ ಉದ್ದೀಪನಾ ಮದ್ದು ನೀಡಲಾಗಿತ್ತು ಎಂಬ ಆರೋಪ ಸಂಬಂಧ ಸಿಐಡಿಯಿಂದ ವರದಿ ಬಂದ ಬಳಿಕ ಪರವಾನಿಗೆ ನೀಡುವ ಬಗ್ಗೆ ಪರಿಶೀಲಿಸುವುದಾಗಿ ಸರಕಾರ ಹೇಳುತ್ತಿದೆ ಎಂದು ರೇಸ್‌ಕೋರ್ಸ್ ಅಧಿಕಾರಿಗಳು ಹೇಳುತ್ತಿದ್ದಾರೆ. ವರದಿ ನೀಡುವ ವರೆಗೆ ನಮ್ಮ ಹೊಟ್ಟೆ ಪಾಡೇನು ಎಂದು ಪ್ರಶ್ನಿಸಿದರು.
ರೇಸ್ ಕೋರ್ಸ್‌ನಲ್ಲಿ ತಾಂತ್ರಿಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದೇನೆ. ಈ ಕೆಲಸ ಬಿಟ್ಟು ಬೇರೆ ಕೆಲಸ ನನಗೆ ಗೊತ್ತಿಲ್ಲ. ಪತ್ನಿಯೂ ಇಲ್ಲಿಯೇ ಕೆಲಸ ಮಾಡುತ್ತಿದ್ದಾಳೆ. ಸುಮಾರು ಎರಡು ತಿಂಗಳಿನಿಂದ ದುಡಿಮೆಯಿಲ್ಲದೆ ಕಷ್ಟವಾಗಿದೆ ಎಂದು ಅವರು ಹೇಳಿದರು.
ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ನೂರಾರು ಸಿಬ್ಬಂದಿ ಸರಕಾರಕ್ಕೆ ಆಗ್ರಹಿಸಿದರು.







