ಅ.30: ಕಲ್ಯಾಣದಿಂದ ಚಾಮರಾಜ ನಗರ ದ ವರೆಗೆ ಬೃಹತ್ ಮಾವನ ಸರಪಳಿ
ಭಯಮುಕ್ತ ಕರ್ನಾಟಕಕ್ಕಾಗಿ ಸೌಹಾರ್ಧ ಕರ್ನಾಟಕದ ಸಂಕಲ್ಪ
ಭಟ್ಕಳ, ಅ. 11: ಭಯಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಸೌಹಾರ್ಧ ಕರ್ನಾಟಕ ಮಾನವ ಸರಪಳಿಯನ್ನು ಅ.30 ರಂದು ರಾಜ್ಯದ್ಯಂತ ನಡೆಸಲು ಸಮಾನ ಮನಸ್ಕ ಸಂಘಟನೆಗಳು ನಿರ್ಧರಿಸಿದ್ದು ಶಾಂತಿ, ಸೌಹಾರ್ಧತೆ, ಸಾಮರಸ್ಯಕ್ಕಾಗಿ ನವಕರ್ನಾಟಕ ನಿರ್ಮಾಣವೊಂದೆ ದಾರಿಯಾಗಿದೆ ಎಂದು ಬಾಗೆಪಲ್ಲಿ ಮಾಜಿ ಶಾಸಕ ರೈತಮುಖಂಡ ಜಿ.ವಿ.ಶ್ರೀರಾಮರೆಡ್ಡಿ ಹೇಳಿದು.
ಅವರು ಬುಧವಾರ ನಗರದ ಅರ್ಬನ್ ಬ್ಯಾಂಕಿನ ಹಾಫ್ಜಿಕಾ ಸಭಾಂಗಣದಲ್ಲಿ ನಡೆದ ಸೌಹಾರ್ಧ ಕರ್ನಾಟಕ ಸಮಾವೆೀಶವನ್ನುದ್ದೇಶಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಮರ್ಶೆ, ಅಭಿಪ್ರಾಯ, ವಿಚಾರಗಳನ್ನು ವ್ಯಕ್ತಪಡಿಸುವ ಮುಕ್ತ ಅವಕಾಶ ಎಲ್ಲರಿಗೂ ಇದೆ. ಆದರೆ ಆಡಳಿತದಲ್ಲಿರು ಸರ್ಕಾರದ ಮುಖ್ಯಸ್ಥರು ವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ನಿಟ್ಟಿನಲ್ಲಿ ಸಕ್ರೀಯರಾಗಿದ್ದಾರೆ. ಅವರನ್ನು ವಿರೋಧಿಸುವವರಿಗೆ ದೇಶದ್ರೋಹಿಗಳು, ರಾಷ್ಟ್ರದ್ರೋಹಿಗಳು ಎಂಬ ಪಟ್ಟಕಟ್ಟುವುದರ ಮೂಲಕ ಭಾರತ ದೇಶದ ಪರಿಕಲ್ಪನೆಯನ್ನೇ ನಾಶ ಮಾಡುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯ ನೂತನ ಕೇಂದ್ರಮಂತ್ರಿಯೊಬ್ಬರು ಹಿಂದೂಗಳ ಕೊಲೆಯಾಗುತ್ತಿದೆ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಆದರೆ ಅವರಿಗೆ ಈ ದೇಶದ ಅಸಂಖ್ಯಾತ ಮುಸ್ಲಿಮ್, ದಲಿತ ಸಮುದಾಯದ ವ್ಯಕ್ತಿಗಳು ಕೊಲೆಯಾಗುತ್ತಿರುವುದು ಕಾಣುತ್ತಿಲ್ಲ. ಇವರು ಕೇವಲ ಹಿಂದೂಗಳ ಪ್ರತಿನಿಧಿ ಎಂಬ ರೀತಿಯಲ್ಲಿ ಮಾತನಾಡುತ್ತಿದ್ದು ಇವರಿಗೆ ಇತರ ಸಮುದಾಯದವರು ಕಣ್ಣಿಗೆ ಕಾಣಿಸುವುದಿಲ್ಲ, ರಾಜ್ಯದಲ್ಲಿ ಮಹೇಶ್ ಪುಜಾರಿ, ವಿನಾಯಕ ಬಾಳಿಗ ರ ಕೊಲೆಯಾಯಿತು. ಇದರ ಕೊಲೆಗಾರರು ಯಾರು ಎಂದು ಮಂತ್ರಿಗಳು ಹೇಳಬೇಕು ಎಂದ ಅವರು ಈ ದೇಶದಲ್ಲಿ ಕೊಲೆಗಾರರ ಸಂಸ್ಕೃತಿಯನ್ನು ಹುಟ್ಟುಹಾಕುಲಾಗುತ್ತಿದೆ ಎಂದು ಹೇಳಿದರು.
ಭಾರತ ದೇಶದ ಸಂಸ್ಕೃತಿಯ ಪ್ರತೀಕರೆಂದು ಹೇಳುಕೊಳ್ಳುವವರು ಭಾರತ ಅಂದ್ರೆ ಏನು ಎಂಬುದನ್ನು ತಿಳಿದಿಲ್ಲ. ಭಿನ್ನ ಸಂಸ್ಕೃತಿ, ಭಿನ್ನ ಭಾಷೆ, ಭಿನ್ನ ನಾಗರೀಕತೆ ಇದು ಭಾರತ ದೇಶದ ಪರಿಕಲ್ಪನೆ. ಆದರೆ ಇಲ್ಲಿ ಒಂದೇ ಧರ್ಮ, ಒಂದೇ ಸಂಸ್ಕೃತಿ, ಒಂದೇ ಆಹಾರ ಪದ್ದತಿಯನ್ನು ಹೇರುವ ಹುನ್ನಾರ ನಡೆಯುತ್ತಿದ್ದು ಸರ್ವರನ್ನು ನಾಶ ಮಾಡಲು ಹೊರಟಿರುವ ಸಂಘಟಯೊಂದು ಇಲ್ಲಿ ಕೆಲಸ ಮಾಡುತ್ತಿದೆ ಎಂದರು.
ಗಡ್ಡಬಿಟ್ಟವರನ್ನು ಭಯೋತ್ಪಾದಕರೆಂದು ಬಿಂಬಿಸುವ ದುರಂತ ಈ ದೇಶಕ್ಕೆ ಒದಗಿಬಂದಿದೆ. ಆದ್ದರಿಂದ ಬವಸ ನಾಡಾದ ಕಲ್ಯಾಣದಿಂದ ಚಾಮರಾಜ ನಗರ ವರೆಗೆ ಅ.30 ರಂದು ಮಾನವ ಸರಪಳಿ ನಿರ್ಮಿಸಿ ಸೌಹಾರ್ಧ ಕರ್ನಾಟಕ್ಕೆ ಭದ್ರಬುನಾದಿಯನ್ನು ಹಾಕಲಾಗುವುದು ಎಂದರು.
ಶಿರಾಲಿ ಜನತಾ ವಿದ್ಯಾಲಯ ಪ್ರಾಂಶುಪಾಲ ಎ.ಬಿ. ರಾಮರಥ್ ಮಾತನಾಡಿ, ದೇಶ ಹಾಗೂ ರಾಜ್ಯವನ್ನು ಅರಾಜಕತೆಗೆ ತಳ್ಳುವ ಗುಂಪು ಇಲ್ಲಿ ಸಕ್ರೀಯವಾಗಿದ್ದು ತಮ್ಮ ಮಕ್ಕಳನ್ನು ಇಂತಹವರಿಂದ ದೂರವಿಡಬೇಕು, ರಾಜ್ಯದಲ್ಲಿ ವೈಚಾರಿಕ ಹತ್ಯೆಯಾಗುತ್ತಿದ್ದು ಇದು ಖಂಡನೀಯ ಎಂದರು.
ಪರ್ತಕರ್ತ ಎಂ.ಆರ್.ಮಾನ್ವಿ ಮಾತನಾಡಿ, ದೇಶಕ್ಕೆ ಬೆಂಕಿ ಹಾಕುವವರ ನಡುವೆ ನಾವು ಬೆಂಕಿಯನ್ನು ನಂದಿಸುವ ಕೆಲಸ ಮಾಡಬೇಕಾಗಿದೆ. ಸಮಾಜವನ್ನು ಅರಾಜಕತೆಗೆ ಕೊಂಡೊಯ್ಯಲು ಸಮಾಜಿಕ ಜಾಲತಾಣಗಳಲ್ಲಿ ಕೋಮುವಾದಿಗಳು ಸಕ್ರೀಯರಾಗಿದ್ದಾರೆ ಇದಕ್ಕೆ ಉತ್ತರವಾಗಿ ನಾವು ಶಾಂತಿಯನ್ನು ಸ್ಥಾಪಿಸುವ ಕೆಲಸ ಮಾಡಬೇಕಿದೆ ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ಉತ್ತರಕನ್ನಡ ಜಿಲ್ಲಾ ಸಂಚಾಲಕ ಮುಹಮ್ಮದ್ ತಲ್ಹಾ ಸಿದ್ದಿಬಾಪ, ತಂಝೀಂ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮತ್ತಿತರರು ಮಾತನಾಡಿದರು. ಮಹಿಳಾ ಹೋರಾಟಗಾರ್ತಿ ಯಮುನಾ ಗಾಂವ್ಕರ್ ಪ್ರಸ್ತಾವಿಕವಾಗಿ ಮಾತನಾಡಿದರು.
ಉತ್ತರ ಕನ್ನಡ ಜಿಲ್ಲಾ ರೈತ ಮುಖಂಡ ಶಾಂತರಾಮ ನಾಯಕ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಅಂಜುಮನ್ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೋ.ಆರ್.ಎಸ್.ನಾಯಕ ಸ್ವಾಗತಿಸಿದರು.







