ಬಿಬಿಎಂಪಿ ಕಚೇರಿಗೆ ಬೀಗ ಜಡಿದು ಬಿಜೆಪಿ ಪ್ರತಿಭಟನೆ
ರಸ್ತೆ ಗುಂಡಿ ಮುಚ್ಚುವಲ್ಲಿ ಸರಕಾರದ ನಿರ್ಲಕ್ಷ್ಯ ಆರೋಪ

ಬೆಂಗಳೂರು, ಅ.11: ಬಿಬಿಎಂಪಿ ವ್ಯಾಪ್ತಿಯಲ್ಲಿ ಗುಂಡಿ ಬಿದ್ದ ರಸ್ತೆಗಳಿಂದಾಗಿ ವಾಹನ ಸವಾರರು ಸಾವನ್ನಪ್ಪುತ್ತಿದ್ದರೂ ರಾಜ್ಯ ಸರಕಾರ ರಸ್ತೆಗಳನ್ನು ದುರಸ್ಥಿ ಮಾಡುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಮುಖಂಡ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬಿಬಿಎಂಪಿ ಕೇಂದ್ರ ಕಚೇರಿಯ ಮುಖ್ಯದ್ವಾರಕ್ಕೆ ಬೀಜ ಜಡಿದು ಪ್ರತಿಭಟನೆ ನಡೆಸಿದರು.
ಬುಧವಾರ ಬಿಗಿ ಪೊಲೀಸ್ ಭದ್ರತೆ ಇದ್ದರೂ ಲೆಕ್ಕಿಸದೆ ಬಿಜೆಪಿ ಕಾರ್ಯಕರ್ತರು ಬಿಬಿಎಂಪಿ ಕೇಂದ್ರ ಕಚೇರಿಯ ಮುಖ್ಯದ್ವಾರಕ್ಕೆ ಬೀಗ ಜಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಿಪಡಿಸಿದರು.
ಈ ವೇಳೆ ಬಿಜೆಪಿ ಮುಖಂಡ ಆರ್.ಅಶೋಕ್ ಮಾತನಾಡಿ, ಇಂದು ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳಾಗುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಕಾರಣ. ತಮ್ಮ ಅವೈಜ್ಞಾನಿಕ ಆಡಳಿತದಿಂದಾಗಿ ಬೆಂಗಳೂರು ಜನತೆ ಅನಗತ್ಯವಾಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿ ಮುಚ್ಚಲೆಂದು 22 ಕೋಟಿ ರೂ.ಹಣ ವ್ಯಯವಾಗುತ್ತಿದೆ. ಆದರೆ ಗುಂಡಿ ಮುಚ್ಚಿದ್ದು ಮಾತ್ರ ಕಾಣುತ್ತಿಲ್ಲ. ಇದರ ಜೊತೆಗೆ ಬೆಂಗಳೂರು ಅಭಿವೃದ್ಧಿಗೆ 4 ಸಾವಿರ ಕೋಟಿ ರೂ.ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಅಭಿವೃದ್ಧಿಯಾಗಿರುವುದು ಕಣ್ಣಿಗೆ ಕಾಣುತ್ತಿಲ್ಲ. ಹಾಗಾದರೆ ಬಿಡುಗಡೆಯಾದ ಹಣ ಏನಾಯ್ತು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ರಸ್ತೆ ಗುಂಡಿಗೆ ಬಿದ್ದು ಜನ ಸಾಯುತ್ತಾರೆ ಅಂದರೆ ಅದು ನಮ್ಮ ಬೆಂಗಳೂರಿನಲ್ಲಿ ಮಾತ್ರ ಆಗಲು ಸಾಧ್ಯ. ಮಳೆಹಾನಿಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಬಹಳಷ್ಟು ಹಾನಿಯಾಗಿದೆ. ಜನ ತತ್ತರಿಸಿದ್ದಾರೆ. ಆದರೆ, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾತ್ರ ಎಚ್ಚೆತ್ತುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಶಾಸಕ ಸತೀಶ್ ರೆಡ್ಡಿ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್, ಸಂಸದೆ ಶೋಭಾ ಕರಂದ್ಲಾಜಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.







