ಎಲ್ಲ ಅಪಘಾತಗಳಿಗೆ ಗುಂಡಿಗಳೇ ಕಾರಣವಲ್ಲ: ಸಚಿವ ಕೆ.ಜೆ.ಜಾರ್ಜ್
ಬೆಂಗಳೂರು, ಅ. 11: ಉದ್ಯಾನನಗರಿ ಬೆಂಗಳೂರಿನಲ್ಲಿ ಸಂಭವಿಸುವ ಎಲ್ಲ ರಸ್ತೆ ಅಪಘಾತಗಳಿಗೆ ರಸ್ತೆಯಲ್ಲಿನ ಗುಂಡಿಗಳೇ ಕಾರಣವಲ್ಲ. ಈ ಬಗ್ಗೆ ಮಾಧ್ಯಮಗಳು ಅಪಪ್ರಚಾರ ನಡೆಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲ ಮಾಧ್ಯಮಗಳು ಪೂರ್ವಗ್ರಹಪೀಡಿತರಾಗಿ ಎಲ್ಲ ಅಪಘಾತ, ಸಾವುಗಳಿಗೆ ರಸ್ತೆ ಗುಂಡಿಗಳೇ ಕಾರಣ ಎಂಬಂತೆ ಮಾತನಾಡುತ್ತಿವೆ. ಇಂದು ಬೆಳಗ್ಗೆ ಸಂಭವಿಸಿದ ಅಪಘಾತದ ಬಗ್ಗೆ ತಾನೇ ಖುದ್ದು ಡಿಸಿಪಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದರು.
ಇಂದು ಅಪಘಾತವೊಂದು ಸಂಭವಿಸಿದೆ. ದುರಂತವನ್ನು ಯಾರೂ ಅಲ್ಲಗಳೆಯಲು ಆಗುವುದಿಲ್ಲ. ಆದರೆ, ಎಲ್ಲ ಅಪಘಾತಗಳಿಗೂ ರಸ್ತೆ ಗುಂಡಿಗಳೇ ಕಾರಣ ಎಂದು ಪ್ರಚಾರ ಮಾಡುವ ಮೂಲಕ ಬೆಂಗಳೂರು ನಗರದ ಕಿರೀಟಕ್ಕೆ ಕಪ್ಪು ಹೆಸರು ತರಬೇಡಿ ಎಂದು ಅವರು ಮನವಿ ಮಾಡಿದರು.
ಕೆಲ ರಸ್ತೆಗಳು ಹದಗೆಟ್ಟಿವೆ. ಗುಂಡಿಗಳು ಬಿದ್ದಿವೆ, ಎಂಬುದು ಸತ್ಯ. ಕಳೆದ ಹತ್ತು ವರ್ಷಗಳಿಗಿಂತಲೂ ಈ ವರ್ಷ ದಾಖಲೆಯ ಪ್ರಮಾಣದ ಮಳೆ ಬಿದ್ದಿದೆ. ಹೀಗಾಗಿ ರಸ್ತೆಗಳು ಹದಗೆಟ್ಟಿವೆ. ಗುಂಡಿಗಳನ್ನು ಮುಚ್ಚಲು ಸಿಎಂ ಹದಿನೈದು ದಿನದ ಗಡುವು ನೀಡಿದ್ದಾರೆ. ಹಾಟ್‌ಮಿಕ್ಸ್ ಬಳಸಿ ಗುಂಡಿ ಮುಚ್ಚಿದರೆ ಕನಿಷ್ಠ ಒಂದೆರಡು ವರ್ಷ ರಸ್ತೆಗಳು ಚೆನ್ನಾಗಿರುತ್ತವೆ ಎಂದರು.







