ಶಿವಮೊಗ್ಗ: ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ
ಶಿವಮೊಗ್ಗ, ಅ.11: ನಗರದ ಹೊರವಲಯದ ಗಾಡಿಕೊಪ್ಪದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಖಾಸಗಿ ಶಾಲೆಯೊಂದರ ಶಿಕ್ಷಕನು ವಿದ್ಯಾರ್ಥಿಯೋರ್ವನ ಕೈ ಬೆರಳೊಂದರ ಮೂಳೆ ಮುರಿಯುವ ರೀತಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗಾಡಿಕೊಪ್ಪದ ನಿವಾಸಿ, ಆಟೊ ಚಾಲಕ ದಯಾನಂದ ಎಂಬವರ 11 ವರ್ಷದ ಪುತ್ರನೇ ಶಿಕ್ಷಕನಿಂದ ಹಲ್ಲೆಗೊಳಗಾದ ವಿದ್ಯಾರ್ಥಿಯಾಗಿದ್ದಾನೆ. ಕಳೆದ ವಾರ ಈ ಘಟನೆ ನಡೆದಿದೆ. ಈ ಬಗ್ಗೆ ಪೋಷಕರು ಶಾಲೆಯ ಮುಖ್ಯೋಪಾಧ್ಯಯರಿಗೆ ಹಾಗೂ ಆಡಳಿತ ಮಂಡಳಿಯ ಮುಖ್ಯಸ್ಥರ ಗಮನಕ್ಕೆ ವಿಷಯ ತಂದಿದ್ದಾರೆ.
ಆದರೆ ಇಲ್ಲಿಯವರೆಗೂ ಅವರು ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಕನಿಷ್ಠ ಪೋಷಕರಿಗೆ ಸಮಜಾಯಿಷಿ ನೀಡುವುದಾಗಲಿ, ಮಾನವೀಯತೆಯ ದೃಷ್ಟಿಯಿಂದ ಬಾಲಕನಿಗೆ ಚಿಕಿತ್ಸೆ ಕೊಡಿಸಲು ಕೂಡ ಮುಂದಾಗಿಲ್ಲ. ಘಟನೆ ವಿವರ: ಕಳೆದ ವಾರ ಶಾಲೆಯ ಕೊಠಡಿಯೊಳಗೆ ಕೆಲ ವಿದ್ಯಾರ್ಥಿಗಳು ಆಟವಾಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ಶಿಕ್ಷಕನೋರ್ವ, ದಯಾನಂದರವರ ಪುತ್ರನ ಮೇಲೆ ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ಈತನ ಹೊಡೆತದ ರಭಸಕ್ಕೆ ವಿದ್ಯಾರ್ಥಿಯ ಬಲಗೈನ ಕಿರು ಬೆರಳಿನ ಭಾಗದ ಮೂಳೆ ಬಿರುಕು ಬಿಟ್ಟಿದೆ. ಕಾಲುಗಳ ಮೇಲೆ ಬಾಸುಂಡೆ ಮೂಡಿದೆ. ವಿದ್ಯಾರ್ಥಿಯು ಮನೆಗೆ ಆಗಮಿಸಿ ನೋವಿನಿಂದ ಅಳುತ್ತಿದ್ದನ್ನು ಗಮನಿಸಿದ ಪೋಷಕರು ಕಾರಣ ಕೇಳಿದಾಗ, ಶಿಕ್ಷಕನ ಹಲ್ಲೆಯ ವಿವರ ತಿಳಿಸಿದ್ದಾನೆ. ತಕ್ಷಣವೇ ಪೋಷಕರು ಸರಕಾರಿ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಎಕ್ಸ್‌ರೇಯಲ್ಲಿ ಬಾಲಕನ ಕಿರು ಬೆರಳ ಭಾಗದ ಮೂಳೆಗೆ ಹಾನಿಯಾಗಿರುವುದು ಧೃಢಪಟ್ಟಿದೆ.
ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು, ಶಾಲೆಗಳಿಗೆ ಸೂಶಾಲೆಗಳಿಗೆ ಸೂಕ್ತ ನಿರ್ದೇಶನ ರವಾನಿಸಬೇಕು. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದರೆ ಎದುರಿಸಬೇಕಾದ ಪರಿಣಾಮಗಳ ಬಗ್ಗೆ ಶಾಲಾ ಆಡಳಿತ ಮಂಡಳಿಗಳಿಗೆ ತಿಳಿ ಹೇಳುವ ಕೆಲಸ ಮಾಡಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.







