ಯುವತಿಯೊಂದಿಗೆ ಅನುಚಿತ ವರ್ತನೆ ಆರೋಪ: ಗ್ರಾಮಸ್ಥರಿಂದ ಥಳಿತ
ಸುಂಟಿಕೊಪ್ಪ, ಅ.11: ಯುವತಿಯೋ ರ್ವಳನ್ನು ಪುಸಲಾಯಿಸಿ ರಾತ್ರಿ ವೇಳೆ ನಿರ್ಜನ ಪ್ರದೇಶಕ್ಕೆ ಕರೆದ್ಯೊಯ್ದು ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಯತ್ನಿಸಿದ ಆರೋಪದ ಮೇಲೆ ಖಾಸಗಿ ಬಸ್ಸಿನ ನಿರ್ವಾಹಕ ಹಾಗೂ ಕ್ಲೀನರ್‌ಗೆ ಗ್ರಾಮಸ್ಥರು ಥಳಿಸಿದ ಘಟನೆ ನಡೆದಿದೆ.
ಅ.9ರಂದು ರಾತ್ರಿ ವೇಳೆ ಸೋಮವಾರಪೇಟೆಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸಿನ ನಿರ್ವಾಹಕ, ಕ್ಲೀನರ್ ಹಾಗೂ ಮತ್ತೊಂದು ಬಸ್ಸಿನ ಕ್ಲೀನರ್, ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಯುವತಿಯನ್ನು ಮನವೊಲಿಸಿ ಕೂಡಿಗೆ ಸಮೀಪ ಕೂಡ್ಲೂರು ಕೈಗಾರಿಕಾ ಬಡಾವಣೆ ಸಮೀಪ ನಿರ್ಜನಕ್ಕೆ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕ್ರಿಯೆ ನಡೆಸಲು ಪ್ರಯತ್ನಿಸುತ್ತಿದ್ದಾಗ ಸ್ಥಳೀಯ ಗ್ರಾಮಸ್ಥರು ಹಾಗೂ ಲಾರಿ ಚಾಲಕರು ಸಮಯೋಚಿತವಾಗಿ ಎಚ್ಚೆತ್ತು ಖಾಸಗಿ ಬಸ್ಸಿನ ಕಾಮುಕರಿಗೆ ಥಳಿಸಿದ್ದಾರೆ.
ಅವರನ್ನು ಪೊಲೀಸರಿಗೆ ಒಪ್ಪಿಸಲು ಹಿಡಿಯಲು ಮುಂದಾದಾಗ ತಪ್ಪಿಸಿಕೊಂಡು ಪರಾರಿಯಾದರೆನ್ನಲಾಗಿದೆ. ಆನಂತರ ಯುವತಿಗೆ ಬುದ್ಧಿ ಹೇಳಿ ಮನೆ ಸಮೀಪದವರೆಗೆ ಗ್ರಾಮಸ್ಥರು ಬಿಟ್ಟು ಬಂದಿದ್ದಾರೆ ಎನ್ನಲಾಗಿದೆ. ಕೆಲ ಖಾಸಗಿ ಬಸ್ಸಿನಲ್ಲಿ ಕಂಡಕ್ಟರ್ ಲೈಸನ್ಸ್ ಇಲ್ಲದ 18 ವರ್ಷ ವಯೋಮಾನಕ್ಕಿಂತ ಕಡಿಮೆ ವಯಸ್ಸಿನವರನ್ನು ಮಾಲಕರು ನಿರ್ವಾಹಕರನ್ನಾಗಿ ನೇಮಿಸುತ್ತಿದ್ದು, ಶೋಕಿಗಾಗಿ ಈ ಕೆಲಸ ಮಾಡುವ ಅವರು, ಮಹಿಳೆಯರು, ಶಾಲಾ ವಿದ್ಯಾರ್ಥಿನಿಯರನ್ನು ಬಸ್ಸಿನಲ್ಲಿ ಪರಿಚಯ ಮಾಡಿಕೊಂಡು ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗುತ್ತಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಖಾಸಗಿ ಬಸ್ ಮಾಲಕರು, ರಸ್ತೆ ಸಾರಿಗೆ ಪ್ರಾಧಿಕಾರದವರು ಈ ಬಗ್ಗೆ ಎಚ್ಚರವಹಿಸಬೇಕು.ಆರ್‌ಟಿಒ ಅಧಿಕಾರಿಗಳು ಲೈಸನ್ಸ್ ಇಲ್ಲದ ನಿರ್ವಾಹಕರನ್ನು ಪತ್ತೆಹಚ್ಚಿ ಕಾನೂನು ಕ್ರಮಕೈಗೊಳ್ಳಬೇಕು.ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.







