ಬುಡಕಟ್ಟು ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣ: ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ

ಭುವನೇಶ್ವರ, ಅ.11: ಕೊರಪಟ್ ಎಂಬಲ್ಲಿ ಬುಡಕಟ್ಟು ಬಾಲಕಿಯನ್ನು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ ಎನ್ನಲಾದ ನಾಲ್ವರು ಬಿಎಸ್‌ಎಫ್ ಯೋಧರ ಬಂಧನಕ್ಕೆ ವಿಶೇಷ ತನಿಖಾ ದಳವನ್ನು ನೇಮಿಸಲಾಗಿದೆ.
ಕೊರಪಟ್‌ನ ಸೊರಿಸ್‌ಪದರ್ ಗ್ರಾಮದ ಅರಣ್ಯಪ್ರದೇಶದಲ್ಲಿ ಮಂಗಳವಾರ ಗಡಿಭದ್ರತಾ ಪಡೆಯ ನಾಲ್ವರು ಯೋಧರು ಬಾಲಕಿಯನ್ನು ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವುದಾಗಿ ದೂರು ನೀಡಲಾಗಿತ್ತು. ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಪ್ರತಿಭಟನೆ ನಡೆಸಿದ್ದರಲ್ಲದೆ ರಾಷ್ಟ್ರೀಯ ಹೆದ್ದಾರಿ 26ರಲ್ಲಿ ವಾಹನ ಸಂಚಾರಕ್ಕೆ ಕೆಲಹೊತ್ತು ತಡೆಯೊಡ್ಡಿದ್ದರು.
ಈ ಪ್ರದೇಶದಲ್ಲಿ ಸಿಆರ್‌ಪಿಎಫ್, ಬಿಎಸ್‌ಎಫ್ ಯೋಧರ ಜೊತೆಗೆ ‘ಕೋಬ್ರಾ’ ಯೋಧರೂ ಭದ್ರತಾ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೆ ಮಾವೊವಾದಿ ನಕ್ಸಲರೂ ಸಕ್ರಿಯರಾಗಿದ್ದಾರೆ. ಆದ್ದರಿಂದ ಅತ್ಯಾಚಾರ ನಡೆಸಿರುವವರನ್ನು ಗುರುತಿಸಲು ವೈಜ್ಞಾನಿಕ ಮಾದರಿ ಬಳಸಿ ಅವರನ್ನು ದಸ್ತಗಿರಿ ಮಾಡಲಾಗುವುದು. ಇದಕ್ಕಾಗಿ ವಿಶೇಷ ದಳವನ್ನು ರಚಿಸಲಾಗಿದೆ ಎಂದು ಒಡಿಶಾ ಡಿಐಜಿ ಆರ್.ಪಿ.ಶರ್ಮ ತಿಳಿಸಿದ್ದಾರೆ.
ಪೋಸ್ಕೊ ಕಾಯ್ದೆಯನ್ವಯ ದೂರು ದಾಖಲಿಸಲಾಗಿದ್ದು ಸಂತ್ರಸ್ತ ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಹೆಚ್ಚುವರಿ ಜಿಲ್ಲಾ ವೈದ್ಯಾಧಿಕಾರಿ ಡಾ ಪರಶುರಾಮ್ ಚಂಪತಿರಾಯ್ ತಿಳಿಸಿದ್ದಾರೆ. ಘಟನೆಯನ್ನು ಅಮಾನವೀಯ ಎಂದು ಖಂಡಿಸಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಬಾಲಕಿಗೆ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ, ಘಟನೆಯ ಕುರಿತು ವಾರದೊಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಒಡಿಶಾ ಮಾನವ ಹಕ್ಕುಗಳ ಆಯೋಗವು ಗೃಹ ಕಾರ್ಯದರ್ಶಿ ಹಾಗೂ ಮಾನವಹಕ್ಕು ರಕ್ಷಣಾ ಘಟಕದ ಹೆಚ್ಚುವರಿ ಪ್ರಧಾನ ನಿರ್ದೇಶಕರಿಗೆ ಸೂಚಿಸಿದೆ.







