ಭಾರತಕ್ಕೆ ನಾಳೆ ಕೊನೆಯ ಪಂದ್ಯ: ಪರಾಗ್ವೆಗೆ ಹ್ಯಾಟ್ರಿಕ್ ಗುರಿ

ಹೊಸದಿಲ್ಲಿ, ಅ.11: ಸ್ಫೂರ್ತಿಯುತ ಪ್ರದರ್ಶನದಿಂದ ಶ್ಲಾಘನೆಗೆ ಒಳಗಾಗಿರುವ ಭಾರತ ತಂಡ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಗುರುವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಘಾನಾ ವಿರುದ್ಧ ಮತ್ತೊಂದು ಕಠಿಣ ಸವಾಲು ಎದುರಿಸಲಿದೆ.
ತನ್ನ ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ 0-3 ರಿಂದ ಸೋತಿರುವ ಭಾರತ ತಂಡ ಕೊಲಂಬಿಯಾ ವಿರುದ್ಧ 2ನೆ ಪಂದ್ಯದಲ್ಲಿ ಸ್ಫೂರ್ತಿಯುತ ಪ್ರದರ್ಶನದಿಂದ ಗಮನ ಸೆಳೆದಿತ್ತು. ಭಾರತೀಯರು ವಿಶ್ವಶ್ರೇಷ್ಠ ತಂಡದ ವಿರುದ್ಧ ಸ್ಪರ್ಧಿಸಲು ಸಮರ್ಥರಿದ್ದಾರೆಂದು ಸಾಬೀತುಪಡಿಸಿದ್ದರು.
ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ‘ಎ’ ಗುಂಪಿನ ಅಂತಿಮ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಘಾನಾ ಪಂದ್ಯ ಗೆಲ್ಲುವ ಫೇವರಿಟ್ ತಂಡವಾಗಿದೆ. ಘಾನಾ ಗುರುವಾರದ ಪಂದ್ಯದಲ್ಲಿ ಜಯ ಸಾಧಿಸಿದರೂ ನಾಕೌಟ್ ಹಂತಕ್ಕೇರುವ ಭರವಸೆಯಿಲ್ಲ. ‘ಎ’ ಗುಂಪಿನಲ್ಲಿ ಅಮೆರಿಕ ಈಗಾಗಲೇ ಅಂತಿಮ-16ರ ಸುತ್ತಿಗೇರಿದ್ದು, ಕೊಲಂಬಿಯಾ ಹಾಗೂ ಘಾನಾ ತಲಾ 3 ಅಂಕ ಗಳಿಸಿವೆ. ಈವರೆಗೆ ಒಂದೂ ಗೆಲುವನ್ನು ದಾಖಲಿಸದ ಭಾರತ ತಂಡ ಐದು ಗೋಲುಗಳನ್ನು ಬಿಟ್ಟುಕೊಟ್ಟು ಕೇವಲ ಒಂದು ಗೋಲು ಗಳಿಸಿದೆ. ಭಾರತದ ಪಾಳಯದಲ್ಲಿ ಗೋಲ್‌ಕೀಪರ್ ಧೀರಜ್ ಸಿಂಗ್ ಎರಡೂ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಅನ್ವರ್ ಅಲಿ ಹಾಗೂ ನಮಿತ್ ದೇಶಪಾಂಡೆ ಉತ್ತಮ ಪ್ರದರ್ಶನ ನೀಡಿದ್ದಾರೆ.
ಹ್ಯಾಟ್ರಿಕ್ ಗೆಲುವಿನತ್ತ ಪರಾಗ್ವೆ: ಈಗಾಗಲೇ ಪ್ರಿ-ಕ್ವಾರ್ಟರ್‌ಫೈನಲ್ ಸ್ಥಾನವನ್ನು ದೃಢಪಡಿಸಿರುವ ಪರಾಗ್ವೆ ನವಿಮುಂಬೈನಲ್ಲಿ ಗುರುವಾರ ನಡೆಯಲಿರುವ ‘ಬಿ’ಗುಂಪಿನ ಪಂದ್ಯದಲ್ಲಿ ಟರ್ಕಿಯನ್ನು ಎದುರಿಸಲಿದ್ದು, ಹ್ಯಾಟ್ರಿಕ್ ಗೆಲುವಿನತ್ತ ಚಿತ್ತವಿರಿಸಿದೆ.
ಮಾಲಿ(3-2) ಹಾಗೂ ನ್ಯೂಝಿಲೆಂಡ್(4-2)ತಂಡವನ್ನು ಮಣಿಸಿರುವ ದಕ್ಷಿಣ ಅಮೆರಿಕ ತಂಡ ಪರಾಗ್ವೆ ಪ್ರಶಸ್ತಿ ಜಯಿಸುವ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ. ಎರಡೂ ಪಂದ್ಯಗಳಲ್ಲಿ ಆಕ್ರಮಣಕಾರಿ ಪ್ರದರ್ಶನ ನೀಡಿದೆ. ಮಾಲಿ ವಿರುದ್ಧ 3-0 ಅಂತರದಿಂದ ಸೋತಿರುವ ಟರ್ಕಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.
ಕೊಲಂಬಿಯಾಕ್ಕೆ ಗೆಲ್ಲಲೇಬೇಕಾದ ಪಂದ್ಯ: ನವಿಮುಂಬೈನಲ್ಲಿ ಗುರುವಾರ ನಡೆಯಲಿರುವ ‘ಎ’ ಗುಂಪಿನ ಪಂದ್ಯದಲ್ಲಿ ಪ್ರಶಸ್ತಿ ಸ್ಪರ್ಧೆಯಲ್ಲಿರುವ ಅಮೆರಿಕ ತಂಡ ಅಜೇಯ ಓಟವನ್ನು ಮುಂದುವರಿಸುವ ಗುರಿ ಹೊಂದಿದ್ದರೆ ಕೊಲಂಬಿಯಾ ನಿರ್ಣಾಯಕ ಪಂದ್ಯವನ್ನು ಆಡಲಿದೆ. ಆತಿಥೇಯ ಭಾರತ(3-0) ಹಾಗೂ ಘಾನಾ(1-0) ವಿರುದ್ಧ ಸತತ ಜಯ ಸಾಧಿಸಿರುವ ಅಮೆರಿಕ ಅಂತಿಮ-16ರ ಸುತ್ತಿಗೆ ತಲುಪಿದೆ. ಮತ್ತೊಂದೆಡೆ, ಕೊಲಂಬಿಯಾ ತಂಡ ತನ್ನ ಮೊದಲ ಪಂದ್ಯದಲ್ಲಿ ಘಾನಾ ವಿರುದ್ಧ 0-1 ರಿಂದ ಸೋತಿತ್ತು. ಭಾರತ ವಿರುದ್ಧ 2-1 ರಿಂದ ಪ್ರಯಾಸದ ಗೆಲುವು ದಾಖಲಿಸಿತ್ತು. ಅಮೆರಿಕ ನಾಕೌಟ್ ಸುತ್ತಿಗೆ ಮೊದಲು ಕೊಲಂಬಿಯಾ ವಿರುದ್ಧ ಜಯ ಸಾಧಿಸಿ ನೈತಿಕಸ್ಥೈರ್ಯ ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆೆ. 5 ಬಾರಿ ವಿಶ್ವಕಪ್‌ನಲ್ಲಿ ಭಾಗವಹಿಸಿರುವ ಕೊಲಂಬಿಯಾ 2 ಬಾರಿ ಮೂರನೆ ಸ್ಥಾನ ಪಡೆದಿತ್ತು. ವಿಶ್ವಕಪ್ ಆಡಲು ಮೊದಲ ಬಾರಿ ಭಾರತಕ್ಕೆ ಬಂದಿರುವ ಕೊಲಂಬಿಯಾ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದೆ.







