ಭಾರತದ ನಾಕೌಟ್ ಕನಸು ಭಗ್ನ, ‘ಎ’ ಗುಂಪಿನಲ್ಲಿ ಘಾನಾಕ್ಕೆ ಅಗ್ರ ಸ್ಥಾನ

ಮುಂಬೈ, ಅ.12: ನಾಯಕ ಎರಿಕ್ ಅಯಾ ಬಾರಿಸಿದ ಅವಳಿ ಗೋಲುಗಳ ನೆರವಿನಿಂದ ಘಾನಾ ತಂಡ ಭಾರತ ವಿರುದ್ಧ ಅಂಡರ್-17 ವಿಶ್ವಕಪ್‌ನ ಎ ಗುಂಪಿನ ಕೊನೆಯ ಪಂದ್ಯದಲ್ಲಿ 4-0 ಅಂತರದಿಂದ ಗೆಲುವು ದಾಖಲಿಸಿದೆ.
ಈ ಗೆಲುವಿನ ಮೂಲಕ ಗೋಲು ವ್ಯತ್ಯಾಸದಲ್ಲಿ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನಕ್ಕೇರಿರುವ ಘಾನಾ ಅಂತಿಮ-16 ಸುತ್ತಿಗೆ ಪ್ರವೇಶಿಸಿದೆ. ಮತ್ತೊಂದು ಹೀನಾಯ ಸೋಲುಂಡಿರುವ ಆತಿಥೇಯ ಭಾರತದ ನಾಕೌಟ್ ಕನಸು ಭಗ್ನಗೊಂಡಿದೆ. 43 ಹಾಗೂ 52ನೆ ನಿಮಿಷದಲ್ಲಿ ಗೋಲು ಬಾರಿಸಿದ ಎರಿಕ್ ಘಾನಾ ತಂಡಕ್ಕೆ 2-0 ಮುನ್ನಡೆ ಒದಗಿಸಿದರು. ರಿಚರ್ಸ್ ಡಾನ್ಸೊ(86ನೆ ನಿಮಿಷ) ಹಾಗೂ ಇಮಾನ್ಯುಯೆಲ್ ಟೊಕು(87ನೆ ನಿಮಿಷ) ಕೊನೆಯ ಕ್ಷಣದಲ್ಲಿ ತಲಾ ಒಂದು ಗೋಲು ಬಾರಿಸಿ ಘಾನಾ ತಂಡ ಅಂಕಪಟ್ಟಿಯಲ್ಲಿ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನಕ್ಕೇರಲು ನೆರವಾದರು.
ಗ್ರೂಪ್ ಹಂತದಲ್ಲಿ ಸತತ ಮೂರು ಸೋಲು ಕಂಡಿರುವ ಭಾರತ ತವರುನೆಲದಲ್ಲಿ ತನ್ನ ವಿಶ್ವಕಪ್ ಅಭಿಯಾನ ಕೊನೆಗೊಳಿಸಿದೆ.
ಅಮೆರಿಕದ ಗೆಲುವಿನ ಓಟಕ್ಕೆ ಕೊಲಂಬಿಯಾ ಕಡಿವಾಣ:
ಮುಂಬೈನಲ್ಲಿ ನಡೆದ ವಿಶ್ವಕಪ್‌ನ ‘ಎ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಕೊಲಂಬಿಯಾ ತಂಡ ಅಮೆರಿಕವನ್ನು 3-1 ಗೋಲುಗಳ ಅಂತರದಿಂದ ಮಣಿಸಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತು. ಈ ಗೆಲುವಿನ ಮೂಲಕ ಕೊಲಂಬಿಯಾ ಹಾಗೂ ಅಮೆರಿಕ ತಲಾ 6 ಅಂಕ ಗಳಿಸಿವೆ. ಹೆಡ್-ಟು-ಹೆಡ್ ಫಲಿತಾಂಶದಲ್ಲಿ ಟೈಬ್ರೇಕರ್‌ನಿಂದ ಕೊಲಂಬಿಯಾ ಎರಡನೆ ಸ್ಥಾನ ಪಡೆಯಿತು. ಗುಂಪಿನಲ್ಲಿ ಮೂರನೆ ಶ್ರೇಷ್ಠ ತಂಡವಾಗಿ ಹೊರಹೊಮ್ಮಿರುವ ಅಮೆರಿಕ ಅಂತಿಮ-16ರ ಸುತ್ತಿಗೆ ಪ್ರವೇಶಿಸಿತು. ಕೊಲಂಬಿಯಾದ ಜುಯಾನ್ ವಿಡಾಲ್(3ನೆ ನಿಮಿಷ) ಆರಂಭದಲ್ಲಿ ಮುನ್ನಡೆ ಒದಗಿಸಿಕೊಟ್ಟರು. 24ನೆ ನಿಮಿಷದಲ್ಲಿ ಗೋಲು ಬಾರಿಸಿದ ಅಕೊಸ್ಟಾ ಅಮೆರಿಕ 1-1 ರಿಂದ ಸಮಬಲಸಾಧಿಸಲು ನೆರವಾದರು. ಕ್ರಮವಾಗಿ 67ನೆ ಹಾಗೂ 87ನೆ ನಿಮಿಷದಲ್ಲಿ ಗೋಲು ಬಾರಿಸಿರುವ ಪೆನಾಲೊಝ ಹಾಗೂ ಡಿಬೆರ್ ಕೈಸೆಡೊ ಕೊಲಂಬಿಯಾಕ್ಕೆ 3-1 ಅಂತರದ ಗೆಲುವು ತಂದರು.







