ಅಂತಿಮ-16 ಸುತ್ತಿಗೆ ಮಾಲಿ ಪ್ರವೇಶ

ಹೊಸದಿಲ್ಲಿ, ಅ.12: ನ್ಯೂಝಿಲೆಂಡ್ ವಿರುದ್ಧ 3-1 ಗೋಲುಗಳ ಅಂತರದಿಂದ ಜಯ ಸಾಧಿಸಿರುವ ಮಾಲಿ ತಂಡ ಫಿಫಾ ಅಂಡರ್-17 ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ-16ರ ಸುತ್ತಿನಲ್ಲಿ ಸ್ಥಾನ ಪಡೆದಿದೆ.
2015ರ ವಿಶ್ವಕಪ್‌ನ ರನ್ನರ್-ಅಪ್ ಮಾಲಿ ತಂಡ ‘ಬಿ’ ಗುಂಪಿನಲ್ಲಿ ಎರಡನೆ ಸ್ಥಾನ ಪಡೆದಿದೆ. ನ್ಯೂಝಿಲೆಂಡ್ 3ನೆ ಸ್ಥಾನ ಪಡೆದಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿ ಮೊದಲ ಸ್ಥಾನ ಪಡೆದಿರುವ ಪರಾಗ್ವೆ ಈಗಾಗಲೇ ಮುಂದಿನ ಸುತ್ತಿಗೇರಿದೆ. ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಸಲಾಂ ಜಿದ್ದೌ(18ನೆ ನಿಮಿಷ) ಮಾಲಿ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.
50ನೆ ನಿಮಿಷದಲ್ಲಿ ಗೋಲು ಬಾರಿಸಿದ ಜೆವೌಸ್ಸಾ ಟ್ರೊರ್ ತಂಡದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ನ್ಯೂಝಿಲೆಂಡ್‌ನ ಬದಲಿ ಆಟಗಾರ ಚಾರ್ಲ್ಸ್ ಸ್ಪ್ರೆಗ್ 72ನೆ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು. ಲಸ್ಸಾನಾ ಎನ್‌ಡಿಯಾಯೆ 82ನೆ ನಿಮಿಷದಲ್ಲಿ ಗೋಲು ಬಾರಿಸಿ ಮಾಲಿಗೆ 3-1 ಅಂತರದಿಂದ ಗೆಲುವಿನ ಮಾಲೆ ತೊಡಿಸಿದರು. ಎನ್‌ಡಿಯಾಯೆ ಟೂರ್ನಮೆಂಟ್‌ನಲ್ಲಿ ಮೂರನೆ ಗೋಲು ಬಾರಿಸಿದರು.





