ಕಾರಿನಲ್ಲಿ ನಾಡ ಪಿಸ್ತೂಲ್: ಪೊಲೀಸರಿಂದ ತನಿಖೆ

ಶಿವಮೊಗ್ಗ, ಅ. 12: ಮನೆ ಮುಂಬಾಗ ನಿಲ್ಲಿಸಿದ್ದ ಕಾರಿನಲ್ಲಿ ಕೆಲ ಕಿಡಿಗೇಡಿಗಳು ನಾಡ ಪಿಸ್ತೂಲ್ ಇಟ್ಟು ಪರಾರಿಯಾಗಿರುವ ಘಟನೆ ಜಿಲ್ಲೆಯ ಸಾಗರ ಪಟ್ಟಣದ ಶಿವಪ್ಪನಾಯಕಬಡಾವಣೆ 3ನೆ ತಿರುವಿನಲ್ಲಿ ನಡೆದಿದೆ.
ಕಾರು ಚಾಲಕ ಪ್ರಸನ್ನ ಎಂಬವರ ತವೇರಾ ಕಾರಿನಲ್ಲಿ ಈ ನಾಡ ಪಿಸ್ತೂಲ್ ಪತ್ತೆಯಾಗಿದೆ. ತಕ್ಷಣವೇ ಅವರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ನಾಡ ಪಿಸ್ತೂಲ್ ಹಾಗೂ ಅದರೊಳಗಿದ್ದ ಬುಲೆಟ್‌ವೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಈ ಸಂಬಂಧ ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ: ಎಂದಿನಂತೆ ಪ್ರಸನ್ನ ಅವರು ತಮ್ಮ ತವೇರಾ ಕಾರಿನಲ್ಲಿ ಬಾಡಿಗೆ ತೆರಳಿ ಅ. 10ರಂದು ರಾತ್ರಿ 10 ಗಂಟೆ ಸುಮಾರಿಗೆ ತಮ್ಮ ಮನೆಗೆ ಆಗಮಿಸಿದ್ದಾರೆ. ಕಾರನ್ನು ಮನೆಯ ಮುಂಭಾಗ ಪಾರ್ಕಿಂಗ್ ಮಾಡಿದ್ದಾರೆ. ಮರುದಿನ ಸಂಜೆ ಬಾಡಿಗೆಗೆ ತೆರಳಲು ಕಾರಿನ ಬಾಗಿಲು ತೆರೆದಾಗ ಚಾಲಕನ ಪಕ್ಕದ ಸೀಟ್‌ನಲ್ಲಿ ನಾಡ ಪಿಸ್ತೂಲ್ ಕಂಡುಬಂದಿದೆ. ಕಾರಿನ ಡೋರ್‌ಗೆ ಬಿಳಿ ಕರ್ಚಿಪ್ ಅಂಟಿಕೊಂಡಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.





