ಡಿಸೆಂಬರ್‌ನಲ್ಲಿ ಪದ್ಮಾವತಿ ತೆರೆಗೆ

ರಜಪೂತ ರಾಜವಂಶದ ರಾಣಿ ಪದ್ಮಾವತಿಯ ಕಥೆ ಹೇಳುವ ‘ರಾಣಿ ಪದ್ಮಾವತಿ’ ಚಿತ್ರದ ಟ್ರೇಲರ್ ಇದೀಗ ಟಿವಿವಾಹಿನಿಗಳಲ್ಲಿ, ಅಂತರ್ಜಾಲದಲ್ಲಿ ಬಿಡುಗಡೆಯಾಗಿದೆ.
ಟ್ರೇಲರ್‌ನಲ್ಲಿ ಖಿಲ್ಜಿ ಪಾತ್ರದ ರಣವೀರ್‌ಸಿಂಗ್ ಹಾಗೂ ರಾವಲ್‌ರತನ್‌ಸಿಂಗ್ ನಡುವಿನ ಭೀಕರ ಕಾಳಗದ ದೃಶ್ಯಗಳು ಈಗಾಗಲೇ ಪ್ರೇಕ್ಷಕರನ್ನು ಮೋಡಿ ಮಾಡಿದ್ದು, ಚಿತ್ರದ ಬಗ್ಗೆ ಕುತೂಹಲವನ್ನು ಇಮ್ಮಡಿಗೊಳಿಸಿದೆ.
ಪ್ರಣಯ ಹಾಗೂ ಪ್ರತೀಕಾರದ ಕಥಾವಸ್ತುವನ್ನು ಒಳಗೊಂಡ ಈ ಚಿತ್ರವು ವಿವಾದಗಳ ನಡುವೆ ಚಿತ್ರೀಕರಣಗೊಂಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಚಿತ್ರದಲ್ಲಿ ‘ರಾಣಿ ಪದ್ಮಾವತಿ’ಯ ಪಾತ್ರವನ್ನು ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ, ತನಗೆ ತೋಚಿದ ಹಾಗೆ ತಿರುಚಿದ್ದಾರೆಂದು ಆರೋಪಿಸಿ, ರಜಪೂತ ಸಮುದಾಯದ ಒಂದು ವರ್ಗವು ಭಾರೀ ಪ್ರತಿಭಟನೆಯನ್ನು ನಡೆಸಿತ್ತಲ್ಲದೆ, ಚಿತ್ರೀಕರಣಕ್ಕೂ ಅಡ್ಡಿಪಡಿಸಿತ್ತು.
ಭಾರೀ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ‘ರಾಣಿ ಪದ್ಮಾವತಿ’ಯಾಗಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದರೆ, ಆಕೆಯ ಪತಿ ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಹೀದ್ ಕಪೂರ್ ಅಭಿನಯಿಸಿದ್ದಾರೆ. ಖಿಲ್ಜಿ ರಾಜವಂಶದ ದೊರೆ ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣವೀರ್‌ಸಿಂಗ್ ನಟಿಸಿದ್ದಾರೆ. ಖಿಲ್ಜಿ ಪಾತ್ರದಲ್ಲಿ ರಣವೀರ್‌ಸಿಂಗ್ ಅವರ ಫಸ್ಟ್‌ಲುಕ್ ಕಳೆದ ವಾರ ಬಿಡುಗಡೆಯಾಗಿದ್ದು, ಸಾಕಷ್ಟು ವೈರಲ್ ಆಗಿದೆ. ದೀಪಿಕಾ ಈ ಚಿತ್ರಕ್ಕಾಗಿ 11 ಕೋಟಿ ರೂ. ಸಂಭಾವನೆ ಪಡೆದಿದ್ದು, ಆ ಮೂಲಕ ಭಾರತೀಯ ಚಿತ್ರರಂಗದಲ್ಲಿ ಗರಿಷ್ಠ ಸಂಭಾವನೆ ಪಡೆದಿರುವ ನಟಿಯೆಂಬ ದಾಖಲೆ ನಿರ್ಮಿಸಿದ್ದಾರೆ. ಆದರೆ ಚಿತ್ರದ ನಾಯಕ ನಟರಾದ ಶಹೀದ್ ಕಪೂರ್ ಹಾಗೂ ರಣವೀರ್ ಸಿಂಗ್‌ಗೆ ತಲಾ 8 ಕೋಟಿ ರೂ. ಸಂಭಾವನೆ ದೊರೆತಿದೆ. ಬನ್ಸಾಲಿ ಪ್ರೊಡಕ್ಷನ್ ಹಾಗೂ ವಿಯಾಕೋ 18 ಮೋಶನ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸಿರುವ ‘ರಾಣಿ ಪದ್ಮಾವತಿ’ ಡಿಸೆಂಬರ್ 1ರಂದು ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದ್ದಾಳೆ.







