ರಾಜ್ಯದ ಎಲ್ಲ ಜಾಲತಾಣಗಳಲ್ಲಿ ಏಕರೂಪ ಭಾಷಾ ವ್ಯವಸ್ಥೆ ಜಾರಿ: ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು, ಅ.13: ತಂತ್ರಜ್ಞಾನದಲ್ಲಿ ಕನ್ನಡ ಭಾಷಾ ಅನುಷ್ಠಾನಕ್ಕಾಗಿ ರಾಜ್ಯದ ಎಲ್ಲಾ ಜಾಲತಾಣಗಳಲ್ಲಿ ಏಕರೂಪತೆ ಮತ್ತು ಶಿಷ್ಟತೆಯನ್ನು ತರುವ ಕಾರ್ಯ ತುರ್ತಾಗಿ ಆಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ ತಿಳಿಸಿದ್ದಾರೆ.
ನಗರದಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ದಿನನಿತ್ಯ ಹೊರ ಬರುತ್ತಿರುವ ತಂತ್ರಾಂಶಗಳನ್ನು ಕನ್ನಡಕ್ಕೆ ಒಗ್ಗಿಸಿಕೊಳ್ಳುವ ಜೊತೆಗೆ ಬಳಕೆದಾರರಿಗೆ ಹೆಚ್ಚು ಅನುಕೂಲವಾಗುವಂತೆ ಎಲ್ಲಾ ಜಾಲ ತಾಣಗಳನ್ನು ಕನ್ನಡದಲ್ಲಿ ರೂಪಿಸಿ ಸರಕಾರದ ಯೋಜನೆಗಳನ್ನು ರೈತರು, ಕಾರ್ಮಿಕರನ್ನೊಳಗೊಂಡಂತೆ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಪ್ರಾಧಿಕಾರ ಪ್ರಮುಖ ಹೆಜ್ಜೆಯನ್ನಿಟ್ಟಿದೆ ಎಂದು ಹೇಳಿದರು.
ಸರಕಾರದ ಎಲ್ಲಾ ಇಲಾಖೆಗಳಲ್ಲಿ ಏಕರೂಪದ ಜಾಲತಾಣಗಳನ್ನು ಬಳಕೆಗೆ ತರುವುದರಿಂದ ಜಾಲ ತಾಣಗಳಲ್ಲಿ ಏಕಶಿಷ್ಟತೆಯನ್ನು ನಿರ್ವಹಣೆ ಮಾಡುವುದರಿಂದ ತಪ್ಪುಗಳಿಗೆ ಆಸ್ಪದವಿಲ್ಲದಂತೆ ಹಾಗೂ ಮಾಹಿತಿಯನ್ನು ಸಮಗ್ರವಾಗಿ ಕನ್ನಡದಲ್ಲಿಯೇ ನೀಡಲು ಸಾಧ್ಯವಾಗುತ್ತದೆ ಎಂದರು.
ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಇಲಾಖೆಗಳ ಜಾಲತಾಣಗಳನ್ನು ಪರಿಶೀಲಿಸಿದಾಗ ಹೆಚ್ಚು ಜಾಲತಾಣಗಳು ಕನ್ನಡದಲ್ಲಿ ಇಲ್ಲದಿರುವುದು ಮತ್ತು ಮಾಹಿತಿಯನ್ನು ಆಂಗ್ಲ ಭಾಷೆಯಲ್ಲಿಯೇ ನೀಡಿರುವುದು ಕಂಡು ಬಂದಿದೆ. ಹೀಗಾಗಿ, ಪ್ರಾಧಿಕಾರ ರಾಜ್ಯದ ಎಲ್ಲಾ ಅಂತರ್ಜಾಲ ತಾಣಗಳಲ್ಲಿ ಏಕರೂಪತೆಯನ್ನು ತರುವ ಬಗ್ಗೆ ಶಿಫಾರಸುಗಳನ್ನು ಒಳಗೊಂಡ ವರದಿ ನೀಡುವಂತೆ ಬೇಳೂರು ಸುದರ್ಶನಗೆ ವಹಿಸಿದ್ದು, ಅವರು ಕಾಲಮಿತಿಯೊಳಗೆ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಚರ್ಚಿಸಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಸೂಚಿಗಳ ಅನ್ವಯ ಕನ್ನಡ ಜಾಲ ತಾಣಗಳನ್ನು ಒಂದು ಮಾದರಿಯ ರೀತಿಯಲ್ಲಿ ರೂಪಿಸಿ ಬಳಕೆಗೆ ಅನುವಾಗುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಪರಿಷ್ಕತ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ರಾಜ್ಯದ ಜಾಲತಾಣಗಳಲ್ಲಿ ಏಕರೂಪತೆಯನ್ನು ತರುವಂತೆೆ ಕೋರಲಾಗುತ್ತದೆ ಎಂದು ವಿವರಿಸಿದರು.
ಸಭೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ, ಇ-ಆಡಳಿತದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ನಾಗರಾಜ್, ತಾಂತ್ರಿಕ ನಿರ್ದೇಶಕ ಸುರೇಶ್, ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್. ನರಸಿಂಹಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







