ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಧರಣಿ
ಬೆಂಗಳೂರು, ಅ.13: ನ್ಯಾ.ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಕರ್ತರು ಇಂದು ನಗರದಲ್ಲಿ ತಮಟೆ ಚಳವಳಿ ನಡೆಸಿದರು.
ನಗರದ ಪುರಭವನದ ಮುಂಭಾಗ ಧರಣಿ ನಡೆಸಿದ ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸದಸ್ಯರು, ಕಾರ್ಯಕರ್ತರು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕಲ್ಪಿಸಲು ಸಿದ್ಧಗೊಂಡಿರುವ ಸದಾಶಿವ ಆಯೋಗ ವರದಿಯನ್ನು ಕೂಡಲೆ ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಧರಣಿಯನ್ನು ಉದ್ದೇಶಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಮಂದಕೃಷ್ಣ ಮಾತನಾಡಿ, ಸದಾಶಿವ ಆಯೋಗ ವರದಿ ಜಾರಿಗೆ ಕುರಿತು ರಾಜ್ಯ ಸರಕಾರ ನಿರ್ಲಕ್ಷ ಧೋರಣೆಯನ್ನು ಮುಂದುವರೆಸುತ್ತಿದೆ. ಇದರಿಂದ ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಮಾದಿಗ ಸಮುದಾಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲುವ ಕುರಿತು ಕಾಂಗ್ರೆಸ್ ಸರಕಾರ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಸಮುದಾಯವನ್ನು ವಂಚಿಸುತ್ತಿದೆ. ಮುಂದಿನ ವಿಧಾನ ಸಭಾ ಚುನಾವಣೆಯ ನೀತಿ ಸಂಹಿತೆ ಘೋಷಣೆ ಒಳಗಾಗಿ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಲು ಕೂಡಲೆ ಕೇಂದ್ರ ಸರಕಾರ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ವರದಿಯನ್ನು ಅನುಷ್ಠಾನಗೊಳಿಸುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ. ಮುಂದಿನ ಚುನಾವಣೆಯಲ್ಲಿ ವರದಿಯನ್ನು ಜಾರಿಗೊಳಿಸದಿದ್ದರೆ ಕಾಂಗ್ರೆಸ್ ಸರಕಾರದ ವಿರುದ್ಧ ಜನಾಂದೋಲನ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಧರಣಿ ಬಳಿಕ ನಗರದ ಪುರಭವನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಮೆರವಣಿಗೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾದಿಗ ಸಮುದಾಯದ ಮುಖಂಡರಾದ ಎಂ.ಸಿ.ಶ್ರೀನಿವಾಸ್, ನರಸಿಂಹಮೂರ್ತಿ, ಕೆ.ಬಿ.ನರಸಿಂಹ ಸೇರಿದಂತೆ ಇತರರು ಇದ್ದರು.







