ಭೂಗತ ಪಾತಕಿ ರಶೀದ್ ಮಲಬಾರಿ ಸಹಚರನ ಬಂಧನ

ಮಂಗಳೂರು, ಅ. 13: ಭೂಗತ ಪಾತಕಿ ರಶೀದ್ ಮಲಬಾರಿ ಸಹಚರ, ಜೋಕಟ್ಟೆ ರೈಲ್ವೆ ಗೇಟ್ ಬಳಿಯ ನಿವಾಸಿ ರೌಡಿ ಅಸಾಮಿ ಮಹಮದ್ ಶಮೀರ್ ಅಲಿಯಾಸ್ ಡಾಮಿ ಅಲಿಯಾಸ್ ಡೆಡ್ಲಿ (27) ಎಂಬಾತನನ್ನು ಮಂಗಳೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
2013ರಲ್ಲಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಭೂಗತ ಪಾತಕಿ ರಶೀದ್ ಮಲಬಾರಿ ಮತ್ತು ಆತನ ಸಹಚರ ರೌಡಿ ಅಸಾಮಿ ವಿರುದ್ಧ ಹಫ್ತಾ ವಸೂಲಿ ಮತ್ತು ಬೆದರಿಕೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಮಹಮದ್ ಶಮೀರ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಬಳಿಕ ಆತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಪಣಂಬೂರು ಠಾಣೆಯಲ್ಲಿ ದಾಖಲಾಗಿದ್ದ ಹಲ್ಲೆ ಪ್ರಕರಣದಲ್ಲಿಯೂ ತಲೆಮರೆಸಿಕೊಂಡಿದ್ದು, ಪುತ್ತೂರು ತಾಲೂಕು ಕಬಕ ಗ್ರಾಮದ ಕಲ್ಲಂತಡ್ಕ ಎಂಬಲ್ಲಿ ಆತ ವಾಸವಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಮಂಗಳೂರು ಉತ್ತರ ಉಪ ವಿಭಾಗ ರೌಡಿ ನಿಗ್ರಹ ದಳ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ. ಅವರ ನೇತೃತ್ವದ ತಂಡ ಪತ್ತೆ ಮಾಡಿ ಬಂಧಿಸಿದೆ.
ರೌಡಿ ಅಸಾಮಿ ವಿರುದ್ಧ ಪಣಂಬೂರು ಠಾಣೆಯಲ್ಲಿ ಒಟ್ಟು 5 ಪ್ರಕರಣಗಳು, ಸುರತ್ಕಲ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿವೆ. ಮಂಗಳೂರು ಉತ್ತರ ವಿಭಾಗ ಎಸಿಪಿ ರಾಜೇಂದ್ರ ಡಿ.ಎಸ್. ಅವರ ನೇತೃತ್ವದಲ್ಲಿ ರೌಡಿ ನಿಗ್ರಹ ದಳ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ. ಮತ್ತು ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.





