‘ವಿಕಾಸ್ ಗಾನ್ ಕ್ರೇಝಿ’ಯಿಂದ ಬಿಜೆಪಿಗೆ ಹಾನಿಯಿಲ್ಲ: ಕೇಂದ್ರ ಸಚಿವ

ಹೊಸದಿಲ್ಲಿ,ಅ.13: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಪಕ್ಷದ ಅಧ್ಯಕ್ಷ ಗಾದಿಗೇರಲು ಸಜ್ಜಾಗುತ್ತಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು, ಈ ಬಡ್ತಿಯು ಕಾಂಗ್ರೆಸ್‌ನ ಪತನವನ್ನು ತಡೆಯುವ ಸಾಧ್ಯತೆಗಳಿಲ್ಲ ಎಂದು ಕುಟುಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್,50ರ ವಯಸ್ಸು ತುಂಬ ಹಳೆಯದಾಯಿತು ಎಂದು ನಿಮಗನ್ನಿಸುವುದಿಲ್ಲವೇ ಎಂದು ಪ್ರಶ್ನಿಸಿದರು. ಅಂದ ಹಾಗೆ ಸಿಂಗ್ ರಾಹುಲ್‌ರ ನಿಜವಾದ ವಯಸ್ಸಿಗೆ (47) ಮೂರು ವರ್ಷಗಳನ್ನು ಸೇರಿಸಿಯೇ ಹೇಳಿದ್ದರು.
ರಾಹುಲ್ ಈ ವಾರ ಪ್ರಧಾನಿ ನರೇಂಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ತವರು ರಾಜ್ಯ ಗುಜರಾತ್‌ನನಲ್ಲಿ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ.
ಬಿಜೆಪಿಯು ಕಳೆದ ಸುಮಾರು ಎರಡು ದಶಕಗಳಿಂದ ಗುಜರಾತನ್ನು ನಿರಂತರವಾಗಿ ಆಳುತ್ತಿದೆ. ಬಿಜೆಪಿಯನ್ನು ಅಧಿಕಾರದಿಂದ ಇಳಿಸಲು ಪ್ರಯತ್ನಿಸುತ್ತಿರುವ ರಾಹುಲ್ ದೇಶದಲ್ಲಿ ಆರ್ಥಿಕ ಮಂದಗತಿಗೆ ಮತ್ತು ಉದ್ಯೋಗಗಳ ಕೊರತೆಗೆ ಮೋದಿಯವರನ್ನೇ ಹೊಣೆಯಾಗಿಸುವಂತೆ ಜನರನ್ನು ಕೇಳಿಕೊಳ್ಳುತ್ತಿದ್ದಾರೆ. ಅವರ ಪಕ್ಷವು ಪ್ರಗತಿ ಮತ್ತು ಅಭಿವೃದ್ಧಿಯ ಕುರಿತು ಬಿಜೆಪಿಯ ಪ್ರಸಿದ್ಧ ಮತ್ತು ಸ್ಥಾಪಿತ ನಿಲುವನ್ನು ಅಣಕಿಸುವ ‘ವಿಕಾಸ್ ಗಾನ್ ಕ್ರೇಝಿ (ಅಭಿವೃದ್ಧಿಯು ಹುಚ್ಚು ಹಾದಿಯಲ್ಲಿದೆ)’ ಎಂಬ ಸಾಮಾಜಿಕ ಮಾಧ್ಯಮ ಗಳಲ್ಲಿಯ ಪ್ರಚಾರ ಅಭಿಯಾನವನ್ನು ಹೋದಲ್ಲಿ ಬಂದಲ್ಲಿ ಉಲ್ಲೇಖಿಸುತ್ತಿದೆ.
ಗುಜರಾತ್‌ನಲ್ಲಿ ಬಿಜೆಪಿಯ ಕಾರ್ಯಭಾರವನ್ನು ನಿರ್ವಹಿಸುವ ಹೊಣೆ ಹೊತ್ತಿರುವ ಪ್ರಧಾನಿ ಕಚೇರಿಯ ಸಚಿವ ಜಿತೇಂದ್ರ ಸಿಂಗ್ ಅವರು, ವ್ಯಾಪಕವಾಗಿ ಹರಡಿರುವ ‘ವಿಕಾಸ್ ಗಾನ್ ಕ್ರೇಝಿ’ ಅಭಿಯಾನದಿಂದಾಗಿ ತನ್ನ ಪಕ್ಷಕ್ಕೆ ಯಾವುದೇ ಆತಂಕವಿಲ್ಲ ಎಂದರು.
ಕಾಂಗ್ರೆಸ್ ನಮ್ಮ ಮಟ್ಟಕ್ಕೇರಲು ಪ್ರಯತ್ನಿಸುತ್ತಿದೆ. ಬಿಜೆಪಿ ಮೊದಲಿನಿಂದಲೂ ಚುನಾವಣೆಗಳಲ್ಲಿ ಹೊಸ ಟ್ರೆಂಡ್‌ಗಳನ್ನು ಬಳಸಿಕೊಂಡಿದೆ. ವಾಸ್ತವದಲ್ಲಿ ಹಿಂದಿನ ದಿನಗಳಲ್ಲಿ ವೀಡಿಯೊಗಳನ್ನು ನಿರ್ಮಿಸಿ ಅವುಗಳನ್ನು ಚುನಾವಣೆಯಲ್ಲಿ ಬಳಸಿದ್ದ ಜೈನ್ ಟಿವಿಯ ಸ್ಥಾಪಕರು ಬಿಜೆಪಿಯವರೇ ಆಗಿದ್ದರು ಎಂದ ಅವರು, ವಿಕಾಸ್ ಗಾನ್ ಕ್ರೇಝಿ ಅಭಿಯಾನದಿಂದ ಬಿಜೆಪಿಗೆ ಯಾವುದೇ ಹಾನಿಯಾಗುವುದಿಲ್ಲ. ಈ ಸಾಮಾಜಿಕ ಮಾಧ್ಯಮಗಳೇನು ಎನ್ನುವುದು ಬಿಜೆಪಿಗೆ ಚೆನ್ನಾಗಿ ಗೊತ್ತಿದೆ ಎಂದರು.







