ಉಡುಪಿ: ವಲಸೆ ಕಾರ್ಮಿಕರ ಸಮಸ್ಯೆ ಶೀಘ್ರವೇ ಪರಿಹಾರ; ಸಚಿವ ಪ್ರಮೋದ್ ಭರವಸೆ

ಉಡುಪಿ, ಅ.13: ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು 15 ದಿನಗಳೊಳಗಾಗಿ ಜಿಲ್ಲಾಡಳಿತ, ವಲಸೆ ಕಾರ್ಮಿಕರ ಸಂಘದ ಪ್ರತಿನಿಧಿಗಳೊಂದಿಗೆ ಕೂಲಂಕಷವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸೂಚಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ವಲಸೆ ಕಾರ್ಮಿಕರ ಸಂಘ, ಪರ್ಯಾಯ ಪೇಜಾವರ ಮಠ ಹಾಗೂ ದಿ ಕನ್ಸರ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಸಹಯೋಗದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಇಂದು ಆಯೋಜಿಸಿದ್ದ ‘ಕರ್ನಾಟಕ ವಲಸೆ ಕಾರ್ಮಿಕರ ಸಮಾವೇಶ-2017’ದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಕರಾವಳಿ ಜಿಲ್ಲೆಗಳಿಗೆ ವಲಸೆ ಬಂದಿರುವ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ವಲಸೆ ಕಾರ್ಮಿಕರು, ಮಹಿಳೆಯರು ಹಾಗೂ ಮಕ್ಕಳು ಸೇರಿದ ಇಂದಿನ ಸಮಾವೇಶದಲ್ಲಿ ‘ನಾವೂ ನಿಮ್ಮವರೇ, ನಮಗೂ ಉತ್ತಮ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿ’ ಎಂಬ ಒಕ್ಕೊರಲ ಬೇಡಿಕೆಗೆ ಸಚಿವರು ಉತ್ತರಿಸುತಿದ್ದರು. ಈಗಾಗಲೇ ಕಾರ್ಮಿಕ ಇಲಾಖೆಯಲ್ಲಿರುವ 4000 ಕೋಟಿ ರೂ. ಕಾರ್ಮಿಕರ ಕಲ್ಯಾಣನಿಧಿಯನ್ನು ವಲಸೆ ಕಾರ್ಮಿಕರ ಮೂಲ ಸೌಕರ್ಯಗಳನ್ನು ಒದಗಿಸಲು ಬಳಸುವಂತೆ ಸರಕಾರದೊಂದಿಗೆ, ಸಂಬಂಧಪಟ್ಟ ಸಚಿವಾಲಯದೊಂದಿಗೆ ಗಂಭೀರ ಚರ್ಚೆ ನಡೆಸುವುದಾಗಿ ನುಡಿದ ಪ್ರಮೋದ್, ವಿವಿಧ ಪ್ರದೇಶಗಳಲ್ಲಿರುವ ವಲಸೆ ಕಾರ್ಮಿಕರು ಇರುವಲ್ಲಿಗೇ ಹೋಗಿ ಕಾರ್ಮಿಕರ ಗುರುತು ಚೀಟಿ ಮಾಡುವಂತೆ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸ್ಥಳದಲ್ಲಿ ಸೂಚನೆಯನ್ನೂ ನೀಡಿದರು.
ಸಮಾವೇಶವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ರಾಜ್ಯದ ಮೂಲೆ ಮೂಲೆ ಗಳಿಂದ ಉಡುಪಿಗೆ ಆಗಮಿಸಿ ಅಭಿವೃದ್ಧಿ ಕೈಂಕರ್ಯದಲ್ಲಿ ಕೈಜೋಡಿಸಿದ ವಲಸೆ ಕಾರ್ಮಿಕರು ಜಿಲ್ಲೆಯ ಜನತೆಯೊಂದಿಗೆ ಪ್ರೀತಿ ವಿಶ್ವಾಸ, ಸೌಹಾರ್ದ, ಸಾಮರಸ್ಯದ ಬಾಳ್ವೆ ನಡೆಸಿ ಶಾಂತಿಯಿಂದ ಬದುಕುವಂತಾಗಬೇಕು ಎಂದು ಹಾರೈಸಿದರು.
ಆರ್ಥಿಕ, ಮಾನಸಿಕವಾಗಿ ನೊಂದು ಆಶ್ರಯಕ್ಕಾಗಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಉಡುಪಿಗೆ ಬಂದ ಕಾರ್ಮಿಕರಿಗೆ ಉಡುಪಿಯ ಜನತೆ ಆಶ್ರಯ ಕಲ್ಪಿಸಿದ್ದಾರೆ. ಅವರ ಸೇವಾ ಮನೋಭಾವನೆ ಜನ ಮನ್ನಣೆಗೆ ಪಾತ್ರವಾಗಿದೆ. ಶ್ರೀಕೃಷ್ಣ ಮಠದಲ್ಲೂ ಅನೇಕರು ಶ್ರೀಕೃಷ್ಣನ ಸೇವೆ ಮಾಡುತ್ತಿದ್ದಾರೆ. ವಲಸೆ ಕಾರ್ಮಿಕರಿಂದ ಪ್ರಯೋಜನ ಪಡೆದಿರುವ ಜನ ಹಾಗೂ ಸರಕಾರ ಅವರ ಬೇಡಿಕೆ ಪೂರೈಸಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ವಲಸೆ ಕಾರ್ಮಿಕರ ಬೇಡಿಕೆಯನ್ನು ಪೂರೈಸುವುದು ಸರಕಾರ, ಜನಪ್ರತಿನಿ ಹಾಗೂ ಜಿಲ್ಲಾಡಳಿತದ ಜವಾಬ್ದಾರಿ. ಆದರೆ ಪರಿಸರದಲ್ಲಿ ನೈರ್ಮಲ್ಯ ಕಾಪಾಡುವುದು, ಕುಡಿತದಿಂದ ದೂರವಿರುವುದು ನಿಮ್ಮ ಜವಾಬ್ದಾರಿ. ಮಕ್ಕಳಿಗೆ ಶಿಕ್ಷಣ ನೀಡಿ ನಾಗರಿಕ ಸಮಾಜದೊಂದಿಗೆ ಸರಿ ಸಮಾನವಾಗಿ ಬಾಳಬೇಕಾದ ಅನಿವಾರ್ಯ ವಿದೆ ಎಂದರು. ಅಲೆವೂರು ಗ್ರಾಪಂ ವ್ಯಾಪ್ತಿಯಲ್ಲಿ ವಲಸೆ ಕಾರ್ಮಿಕರಿಗೆ 2.5 ಸೆಂಟ್ಸ್ ಜಾಗ ನೀಡಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರುವುದು ಶ್ಲಾಘನೀಯ. ಅದೇ ರೀತಿ ಹಾರಾಡಿಯಲ್ಲಿ 50 ಸೆಂಟ್ಸ್ ಜಾಗವಿದ್ದು, ಹಂಚಿಕೆ ಮಾಡಿ ನೀಡಲು ಕ್ರಮ ಕೈಗೊಳ್ಳಲಾಗುವುದೆಂದರು.
ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ವಲಸೆ ಕಾರ್ಮಿಕರ ಸಂಘದ ಅಧ್ಯಕ್ಷ ಸಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ದಿನಕರ್ ಬಾಬು, ತಾಪಂ ಉಪಾಧ್ಯಕ್ಷ ರಾಜೇಂದ್ರ ಪಿ., ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್, ಹಾರಾಡಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ ಆನಂದ ಶೆಟ್ಟಿ, ಹರೀಶ್ ಕಿಣಿ, ಕಟಪಾಡಿ ದುರ್ಗಾಪರಮೇಶ್ವರಿ ಶಾಲೆ ಸಂಚಾಲಕ ರಂಜನ್ ಹೆಗ್ಡೆ ಉಪಸ್ಥಿತರಿದ್ದರು.
ಮುಖಂಡರಾದ ಶ್ರೀರಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಲ್ಲಪ್ಪ ಸ್ವಾಗತಿಸಿ, ಬಸವರಾಜ ರಾಥೋಡ ವಂದಿಸಿದರು. ಶ್ರೀನಿವಾಸ ಕಾರ್ಯಕ್ರಮ ನಿರೂಪಿಸಿದರು.







