ಕೇಂದ್ರ ಗೃಹ ಸಚಿವರ ನಿರ್ಧಾರಕ್ಕೆ ದಿನೇಶ್ ಗುಂಡೂರಾವ್ ಆಕ್ರೋಶ
ರಾಜ್ಯದಿಂದ ಸಿಆರ್‌ಪಿಎಫ್ ಕೇಂದ್ರ ಕಚೇರಿ ಸ್ಥಳಾಂತರ ಆದೇಶ

ಬೆಂಗಳೂರು, ಅ.13: ಕನಕಪುರ ರಸ್ತೆಯ ಕಗ್ಗಲಿಪುರ ಸಮೀಪದ ತರಳು ಗ್ರಾಮದಲ್ಲಿರುವ ಸಿಆರ್‌ಪಿಎಫ್‌ನ ಕೇಂದ್ರ ಕಚೇರಿಯನ್ನು ನಿಮ್ಮ ತವರು ಜಿಲ್ಲೆಯ ಉತ್ತರ ಪ್ರದೇಶದ ಚಾಂದೌಲಿಗೆ ಸ್ಥಳಾಂತರ ಮಾಡುತ್ತಿರುವ ಕ್ರಮ ಸರಿಯಲ್ಲ ಎಂದು ಕೇಂದ್ರ ಸಚಿವ ರಾಜನಾಥಸಿಂಗ್ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಎಸ್‌ಟಿ ಸೇರಿದಂತೆ ವಿವಿಧ ಮೂಲಗಳಿಂದ ರಾಜ್ಯದಿಂದ ಅಪಾರ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡುತ್ತಿದ್ದರೂ, ಕೇಂದ್ರ ಸರಕಾರ ಮಾತ್ರ ರಾಜ್ಯಕ್ಕೆ ನೀಡಬೇಕಾದ ಪಾಲಿನಲ್ಲಿ ನಿಗದಿತ ಹಣ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ಈ ಮೊದಲು ಕೇಂದ್ರದಿಂದ ರಾಜ್ಯದ ರೈತರಿಗೆ ಬರ ಪರಿಹಾರದಲ್ಲೂ ಅನ್ಯಾಯವಾಗಿದೆ. ಇದೀಗ ರಾಜ್ಯದಿಂದ ಸಿಆರ್‌ಪಿಎಫ್ ಕೇಂದ್ರ ಕಚೇರಿ ಸ್ಥಳಾಂತರ ಮಾಡುತ್ತಿರುವುದು ರಾಜ್ಯಕ್ಕೆ ಮಾಡಿರುವ ಮತ್ತೊಂದು ದ್ರೋಹವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಾಂದೌಲಿಗೆ ಸಿಆರ್‌ಪಿಎಫ್ ಕೇಂದ್ರ ಕಚೇರಿಯನ್ನು ಸ್ಥಳಾಂತರಿಸಲು ಮೇ 25ರಂದು ಆದೇಶ ಹೊರಡಿಸಲಾಗಿದೆ. ಕೇಂದ್ರ ಸರಕಾರ ಹೊರಡಿಸಿರುವ ಕೇಂದ್ರ ಕಚೇರಿ ಸ್ಥಳಾಂತರಕ್ಕೆ ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲ. ರಾಜಕೀಯ ಕಾರಣಗಳಿಗಾಗಿ ಸ್ಥಳಾಂತರ ಮಾಡಲಾಗುತ್ತಿದೆ. ಆ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂಬ ಕೂಗು ಎದ್ದಿದೆ ಎಂದು ತಿಳಿಸಿದರು.
ಲಖನೌ, ಅಲಹಾಬಾದ್, ರಾಂಪುರ, ಅಮೇಥಿ ಹಾಗೂ ನೋಯ್ಡ ಸೇರಿದಂತೆ ಉತ್ತರಪ್ರದೇಶದಲ್ಲಿ ಈಗಾಗಲೇ ಸಿಆರ್‌ಪಿಎಫ್‌ನ ಐದು ಕೇಂದ್ರ ಕಚೇರಿಗಳಿವೆ. ಆದರೂ, ಚಾಂದೌಲಿಗೆ ನಮ್ಮ ರಾಜ್ಯದಿಂದ ಮತ್ತೊಂದು ಸಿಆರ್‌ಪಿಎಫ್ ಕೇಂದ್ರ ಕಚೇರಿ ಸ್ಥಳಾಂತರಿಸಲಾಗುತ್ತಿದೆ. ಇದರ ಅಗತ್ಯವೇನಿದೆ, ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ನಿರ್ಧಾರವಲ್ಲವೇ ಎಂದು ಅವರು ಪ್ರಶ್ನಿಸಿದರು.
ತರಳು ಗ್ರಾಮದಲ್ಲಿರುವ ಸಿಆರ್‌ಪಿಎಫ್‌ನ ಕೇಂದ್ರ ಕಚೇರಿಯಲ್ಲಿ 1400 ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಶೇ.50ರಷ್ಟು ಕನ್ನಡಿಗರಿದ್ದಾರೆ. ಇದೀಗ ಈ ಸಿಆರ್‌ಪಿಎಫ್ ಕಚೇರಿ ಉತ್ತರಪ್ರದೇಶಕ್ಕೆ ಸ್ಥಳಾಂತರಗೊಂಡರೆ ಕನ್ನಡಿಗರಿಗೆ ಈ ಮೂಲಕ ಭಾರಿ ಅನ್ಯಾಯವಾಗಲಿದೆ ಎಂದರು.
ರಾಜ್ಯ ಸರಕಾರ ತರಳು ಗ್ರಾಮದಲ್ಲಿ ಸಿಪಿಆರ್‌ಪಿಎಫ್ ಕೇಂದ್ರ ಕಚೇರಿಗಾಗಿ ಕೋಟ್ಯಂತರ ರೂ.ಬೆಲೆ ಬಾಳುವ 220 ಎಕರೆ ಜಮೀನು ನೀಡಿದೆ. ಈ ಜಮೀನಿನಲ್ಲಿ ಸುಸಜ್ಜಿತ ಕ್ಯಾಂಪಸ್ ಈಗಾಗಲೇ ನಿಮಾರ್ಣಗೊಳ್ಳುತ್ತಿದೆ. ಈಗ ಚಾಂದೌಲಿಗೆ ಸ್ಥಳಾಂತರ ಆಗುತ್ತಿರುವ ಕಚೇರಿಗೆ ಅಗತ್ಯ ಮೂಲ ಸೌಲಭ್ಯಗಳು ಇಲ್ಲ. ಜಮೀನಿನಿಂದ ಹಿಡಿದು ಎಲ್ಲವೂ ಹೊಸದಾಗಿ ಆಗಬೇಕಿದೆ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದು, ಇದನ್ನು ಮಾಧ್ಯಮಗಳು ವರದಿ ಮಾಡಿವೆ. ಹೀಗಿರುವಾಗ ತರಾತುರಿಯಲ್ಲಿ ಸ್ಥಳಾಂತರಕ್ಕೆ ಕೈ ಹಾಕಿರುವ ಈ ನಿರ್ಧಾರ ದುರುದ್ದೇಶಪೂರ್ವಕವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ರಾಜ್ಯದ 17 ಬಿಜೆಪಿ ಸಂಸದರು, 5 ಬಿಜೆಪಿಯ ಕೇಂದ್ರ ಸಚಿವರು ಈ ಕುರಿತು ತುಟಿಯನ್ನು ಬಿಚ್ಚದಿರುವಾಗ, ರಾಜ್ಯದಿಂದ ಸಿಆರ್‌ಪಿಎಫ್ ಕೇಂದ್ರ ಕಚೇರಿ ಸ್ಥಳಾಂತರಿಸುವ ಆದೇಶ ರದ್ದುಪಡಿಸುವಂತೆ ಒತ್ತಾಯಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ಕೇಂದ್ರ ಗೃಹ ಸಚಿವರಿಗೆ ಪತ್ರವನ್ನು ಬರೆದಿದೆ. ನಾನು ಒಂದು ಪತ್ರವನ್ನು ಬರೆದಿದ್ದೇನೆ ಎಂದರು.
ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಪ್ರತಿಬಾರಿಯೂ ರಾಜ್ಯದೊಂದಿಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಲೆ ಬಂದಿದೆ. ಕೆಪಿಸಿಸಿ ಮೂಲಕ ಕೇಂದ್ರ ಸರಕಾರಕ್ಕೆ ಈ ಕರ್ನಾಟಕ ವಿರೋಧಿ ನೀತಿಯನ್ನು ಹಿಂಪಡೆದು, ಯಾವುದೇ ಕಾರಣಕ್ಕೂ ತರಳು ಗ್ರಾಮದಿಂದ ಸಿಆರ್‌ಪಿಎಫ್ ಕೇಂದ್ರ ಕಚೇರಿಯನ್ನು ಸ್ಥಳಾಂತರಿಸದಂತೆ ಆಗ್ರಹಿಸಲಾಗುವುದು ಎಂದು ಅವರು ತಿಳಿಸಿದರು.
ಭಾಷಾ ಪ್ರಯೋಗ ಸರಿಯಾಗಿರಬೇಕು:
ಪ್ರಧಾನಿ ಬಗ್ಗೆ ಸಚಿವ ರೋಶನ್‌ಬೇಗ್ ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ಯಾರ ಬಗ್ಗೆಯಾದರೂ ಮಾತನಾಡುವಾಗ ಭಾಷಾ ಪ್ರಯೋಗ ಸರಿಯಾಗಿರಬೇಕು. ಪ್ರಧಾನಿಯೇ ಆಗಿರಲಿ, ಸಾಮಾನ್ಯ ಪ್ರಜೆಯೇ ಆಗಿರಲಿ, ಮತ್ತೊಬ್ಬರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಬಾರದು.
-ದಿನೇಶ್‌ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ







