ಅ.16: ವಿಕಲಚೇತನ ಪುನರ್ಸತಿ ಕಾರ್ಯಕರ್ತರ ಪ್ರತಿಭಟನೆ
ಪುತ್ತೂರು, ಅ. 13: ತಾಲ್ಲೂಕು ವಿಕಲಚೇತನರ ವಿವಿಧೋದ್ದೇಶ (ಎಂ.ಆರ್.ಡಬ್ಲೂ) ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ (ವಿ.ಆರ್.ಡಬ್ಲೂ) ಸಮಿತಿಯ ಕಾರ್ಯಕರ್ತರ ನೌಕರಿಯನ್ನು ಖಾಯಂಗೊಳಿಸುವಂತೆ ಮತ್ತು ಗೌರವ ಧನ ಹೆಚ್ಚಳ ಮಾಡುವಂತೆ ಆಗ್ರಹಿಸಿ ಅ.16ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕಾರ್ಯಕರ್ತರ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ನಾಯಕ್ ಅವರು ತಿಳಿಸಿದರು.
ಪುತ್ತೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಸುಮಾರು 12 ಸಾವಿರದಷ್ಟು ಮಂದಿ ವಿಕಲಚೇತನರಿದ್ದಾರೆ. ವಿಕಲ ಚೇತನರ ಅಭ್ಯುದಯಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿರುವ ವಿಕಲಚೇತನರ ವಿವಿಧೋದ್ದೇಶ (ಎಂ.ಆರ್.ಡಬ್ಲೂ) ಕಾರ್ಯಕರ್ತರಿಗೆ ರೂ.6ಸಾವಿರ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ರೂ.3 ಸಾವಿರ ಗೌರವಧನ ನೀಡಲಾಗುತ್ತಿದೆ. ಈ ಸಣ್ಣ ಮೊತ್ತದ ಗೌರವಧನದಲ್ಲಿ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದರು.
ವಿಕಲ ಚೇತನರ ಸೇವೆ ಮಾಡುತ್ತಿರುವ ಕಾರ್ಯಕರ್ತರ ಸೇವೆಯನ್ನು ಗುರುತಿಸಿ ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಕಾರ್ಮಿಕ ಕಾಯ್ದೆಯಡಿ ಕನಿಷ್ಟ ವೇತನವಾದರೂ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು. ಜಿಲ್ಲಾ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಅ.16ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಮರಳೀಧರ್ ನಾಯಕ್, ಎಂಡೋ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಫೀರ್ ಮಹಮ್ಮದ್, ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಸಂಘದ ಗೌರವ ಸಲಹೆಗಾರರರಾದ ಪುತ್ತೂರಿನ ಅಸಹಾಯಕರ ಸೇವಾ ಸಂಘದ ಅಧ್ಯಕ್ಷೆ ನಯನಾ ವಿ.ರೈ, ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಜೋನ್ ಬ್ಯಾಪ್ಟಿಸ್ಟ್ ಡಿ.ಸೋಜಾ ಮತ್ತು ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದವರು ತಿಳಿಸಿದರು. ಪ್ರತಿಭಟನೆಯಲ್ಲಿ ಎಲ್ಲಾ ಕಾರ್ಯಕರ್ತರು ಭಾಗವಹಿಸುವಂತೆ ಅವರು ವಿನಂತಿಸಿಕೊಂಡರು.
ಜಿಲ್ಲಾ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಸಂಘದದ ಗೌರವ ಸಲಹೆಗಾರರಾದ ನಯನಾ ವಿ.ರೈ, ಅಧ್ಯಕ್ಷ ಜೋನ್ ಬ್ಯಾಪ್ಟಿಸ್ಟ್ ಡಿ.ಸೋಜಾ, ಗೌರವಾಧ್ಯಕ್ಷ ನವೀನ್‌ಕುಮಾರ್, ಜೊತೆ ಕಾರ್ಯದರ್ಶಿ ಶೇಸಪ್ಪ ಶಾಂತಿನಗ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.







