ಬೆಂಗಳೂರು: ಧಾರಾಕಾರ ಮಳೆಗೆ ಐವರ ಬಲಿ

ಬೆಂಗಳೂರು, ಅ.13: ಶುಕ್ರವಾರ ಸಂಜೆ ನಗರದಲ್ಲಿ ಸುರಿದ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಗೆ ದಂಪತಿ ಸೇರಿ ಐವರು ಮೃತಪಟ್ಟಿದ್ದಾರೆ.
ಕುರುಬರಹಳ್ಳಿಯ 18ನೆ ಕ್ರಾಸ್‌ನಲ್ಲಿ ಮನೆಗೋಡೆ ಕುಸಿದ ಪರಿಣಾಮ ದಂಪತಿಗಳಾದ ಶಂಕರಪ್ಪ ಮತ್ತು ಕಮಲಮ್ಮ ಮೃತಪಟ್ಟಿದ್ದಾರೆ. ನಗರದ ಲಗ್ಗೆರೆ ರಾಜಕಾಲುವೆಯಲ್ಲಿ ತಾಯಿ ಮೀನಾಕ್ಷಿ ಮತ್ತು ಮಗಳು ಪುಷ್ಪಾ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಅಲ್ಲದೆ, ನಗರದ ಕುರುಬರಹಳ್ಳಿ ವಾರ್ಡ್‌ನ ಎಚ್‌ಬಿಕೆ ಲೇಔಟ್‌ನ ವೆಂಕಟರಮಣ ದೇವಾಲಯ ಸಮೀಪದ ರಾಜಕಾಲುವೆಯಲ್ಲಿ ದೇವಾಲಯದ ಅರ್ಚಕ ವಾಸುದೇವ್ ಎಂಬವರು ನೀರು ಪಾಲಾಗಿದ್ದಾರೆ.
ನಗರದ ಬಹುಪಾಲು ತಗ್ಗು ಪ್ರದೇಶಗಳ ಮನೆಗಳಲ್ಲಿ ಮಳೆ ನೀರು ನುಗ್ಗಿದ್ದು, ಜನರ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆಯಲ್ಲಿ ವಾಹನಗಳು ಮಳೆ ನೀರಿಗೆ ಸಿಕ್ಕಿ ಸವಾರರು ಪರದಾಡುವಂತಾಯಿತು.
ರಕ್ಷಣಾ ಕಾರ್ಯಾಚರಣೆ: ಮಳೆಯ ಅಬ್ಬರಕ್ಕೆ ಉದ್ಯಾನ ನಗರಿ ನಲುಗಿ ಹೋಗಿದೆ. ನಗರದಲ್ಲಿ ಜಲಾವೃತಗೊಂಡಿರುವ ಪ್ರದೇಶಗಳಲ್ಲಿ ಪಾಲಿಕೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಸಂಜೆ 7 ಗಂಟೆಗೆಯಿಂದ ಸುಮಾರು ಎರಡು ಗಂಟೆಗಳ ಕಾಲ ಸುರಿದ ಮಹಾ ಮಳೆಗೆ ಬೆಂಗಳೂರು ಅಕ್ಷರಶಃ ನುಲುಗಿ ಹೋಗಿದೆ. ಯಶವಂತಪುರ, ಲಗ್ಗೆರೆ, ಹೊಸಗುಡ್ಡದಹಳ್ಳಿ, ಮಲ್ಲೇಶ್ವರ, ರಾಜಾಜಿನಗರ, ನವರಂಗ್ ಸೇರಿದಂತೆ ವಿವಿಧೆಡೆ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಸಚಿವರಿಗಾಗಿ ಒನ್ ವೇ: ಧಾರಾಕಾರ ಮಳೆಗೆ ನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಈ ಮಧ್ಯೆ ರೇಸ್‌ಕೋರ್ಸ್ ರಸ್ತೆಯಲ್ಲಿ ಸಚಿವರೊಬ್ಬರ ಕಾರು ಚಲಿಸಲು ರಸ್ತೆ ಬ್ಲಾಕ್ ಮಾಡಿದ್ದರಿಂದ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಪೋಲಿಸರ ಮತ್ತು ಸಚಿವರ ವರ್ತನೆಗೆ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅರಬ್ಬಿ ಸಮುದ್ರದಲ್ಲಿ ಭಾರೀ ವಾಯುಭಾರ ಕುಸಿತ ಉಂಟಾಗಿದೆ, ಬಂಗಾಳ ಕೊಲ್ಲಿಯಲ್ಲೂ ಏರುಪೇರು ಕಂಡು ಬಂದಿದೆ. ಹಾಗಾಗಿ ಕನಿಷ್ಠವೆಂದರೂ ಎರಡು ಮೂರು ದಿನಗಳ ಕಾಲ ಭಾರೀ ಮಳೆ ಸುರಿಯುವ ಸಂಭವವಿದೆ. ಜೊತೆಗೆ ಗುಡುಗು ಸಿಡಿಲು ಕೂಡ ಇದ್ದು, ಜನ ಎಚ್ಚರಿಕೆಯಿಂದಿರಬೇಕು.
-ಸಂದರ್ ಮೇತ್ರಿ, ಹವಮಾನ ಇಲಾಖೆಯ ನಿರ್ದೇಶಕ







