ಕಾಳು ಮೆಣಸು ಕಳವು: ನಾಲ್ವರ ಬಂಧನ; ಸೊತ್ತು ವಶ

ಪುತ್ತೂರು, ಅ. 13: ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಆರ್ಲಪದವು ಎಂಬಲ್ಲಿನ ಅಂಗಡಿಯೊಂದರಿಂದ ಮೂರು ವಾರದ ಹಿಂದೆ ನಡೆದಿದ್ದ ಸುಮಾರು 7 ಲಕ್ಷ ರೂ. ಮೌಲ್ಯದ ಕಾಳುಮೆಣಸು ಕಳವು ಪ್ರಕರಣವನ್ನು ಪತ್ತೆ ಹಚ್ಚಿರುವ ಗ್ರಾಮಾಂತರ ಪೊಲೀಸರು ಶುಕ್ರವಾರ 4 ಮಂದಿ ಆರೋಪಿ ಗಳನ್ನು ಬಂಧಿಸಿದ್ದಾರೆ.
ಕಾಸರಗೋಡು ಎಣ್ಮಕಜೆ ನಿವಾಸಿ ಮಹಮ್ಮದ್ ಅರ್ಷಾದ್ (23) ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಮೈದಾನಿಮೂಲೆ ಕುಂಡಚ್ಚಗುರಿ ನಿವಾಸಿ ಮಹಮ್ಮದ್ ಸಫ್ವಾನ್ (22) ಪಾಣಾಜೆ ಗ್ರಾಮದ ಆರ್ಲಪದವು ನಿವಾಸಿ ಅಬ್ದುಲ್ ಅಝೀರ್(26) ಮತ್ತು ಆರ್ಲಪದವು ಪರಾರಿ ನಿವಾಸಿ ಪ್ರಮೋದ್ ಕುಟಿನ್ಹಾ (23) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ವರ್ತಮಾನದ ಮೇರೆಗೆ ಪುತ್ತೂರು ಪಾಣಾಜೆ ರಸ್ತೆಯ ಆರ್ಯಾಪು ಗ್ರಾಮದ ಕುಂಜೂರುಪಂಜ ಎಂಬಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರು ಆ ರಸ್ತೆಯಾಗಿ ಆಗಮಿಸುತ್ತಿದ್ದ ಕಳವು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ. ಬಂಧಿತರಿಂದ 7 ಕ್ವಿಂಟ್ವಾಳ್ ಕಾಳುಮೆಣಸು ಬೊಲೆರೋ ಹಾಗೂ ಇನೊವಾ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳ ಉಳಿದ ಆರೋಪಿಗಳಾದ ಬಂಟ್ವಾಳ ತಾಲೂಕಿನ ಉಕ್ಕುಡ ಹಾಗೂ ವಿಟ್ಲ ನಿವಾಸಿಗಳಾದ ಇರ್ಷಾದ್, ಹಕೀಂ, ಸುಧೀರ್ ಹಾಗೂ ಸಮದ್ ತಲೆಮರೆಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ಸೆ. 24 ರಂದು ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಆರ್ಲಪದವು ನಿವಾಸಿ ಕರೀಂ ಎಂಬವರ ಅಂಗಡಿಯಿಂದ ಕಾಳುಮೆಣಸು ಕಳವು ನಡೆದಿತ್ತು. ರಾತ್ರಿ 12 ಗಂಟೆಗೆ ತನ್ನ ಅಂಗಡಿಯಲ್ಲಿ ಇರಿಸಿದ್ದ ಮೆಣಸು ಬೆಳಿಗ್ಗೆ 6 ಗಂಟೆಯ ಒಳಗೆ ಕಳವು ನಡೆಸಲಾಗಿತ್ತು. ಘಟನೆಯ ಕುರಿತು ಸೆ. 25 ರಂದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯ ಕುರಿತು ಪುತ್ತೂರು ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಅನಿಲ್ ಎಸ್ ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ಗ್ರಾಮಾಂತರರ ಎಸ್ ಐ ಅಬ್ದುಲ್ ಖಾದರ್ ತನಿಖೆ ನಡೆಸುತ್ತಿದ್ದರು.
ಕಾರಿನಲ್ಲಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುವ ವೇಳೆ ಆರ್ಲಪದವು ನಿವಾಸಿ ಕರೀಂ ಅವರ ಅಂಗಡಿಯಿಂದ ಕಾಳುಮೆಣಸು ಕಳವು ನಡೆಸಿದ್ದು, ಕಾಳುಮೆಣಸನ್ನು ಉಕ್ಕುಡ ನಿವಾಸಿ ಇರ್ಷಾದ್ ಎಂಬಾತನ ಮನೆಯಲ್ಲಿ ಇಟ್ಟುಕೊಂಡಿದ್ದರು. ಈ ನಡುವೆ ಹಲವು ಬಾರಿ ಮಾರಾಟಕ್ಕೆ ಯತ್ನ ನಡೆಸಿದ್ದರೂ ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ. ಅ. 13 ರಂದು 7 ಕ್ವಿಂಟ್ವಾಳ್ ಮೆಣಸನ್ನು ಎರಡು ವಾಹನದಲ್ಲಿ ತುಂಬಿಸಿ ಮಡಿಕೇರಿಗೆ ಕೊಂಡೊಯ್ಯಲು ಸಿದ್ಧತೆ ನಡೆಸುವ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಕಳವು ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆಯ ಎ ಎಸ್ ಐ ರುಕ್ಮ, ಸಿಬ್ಬಂದಿಗಳಾದ ದರ್ನಪ್ಪ ಗೌಡ, ಚಂದ್ರ, ಕರುಣಾಕರ್, ವಿನಯಕುಮಾರ್, ದಿನೇಶ್ ಪಾಲ್ಗೊಂಡಿದ್ದರು.







