ಅ.15ರಂದು 'ನಮಗೂ ಹೇಳಲಿಕ್ಕಿದೆ' ಸಮಾವೇಶ
ಬೆಂಗಳೂರು, ಅ.13: ಬಿಜೆಪಿ ಸೇರಿದಂತೆ ಸಂಘಪರಿವಾರದ ಸಂಘಟನೆಗಳು ಎನ್‌ಐಎ ತನಿಖಾ ತಂಡವನ್ನು ದುರುಪಯೋಗ ಪಡಿಸಿಕೊಂಡು ಪಿಎಫ್‌ಐ ಸಂಘಟನೆಯನ್ನು ತೇಜೋವಧೆ ಮಾಡುತ್ತಿವೆ. ಸಂಘಪರಿವಾರದ ಈ ಷಡ್ಯಂತ್ರಗಳನ್ನು ವಿರೋಧಿಸಿ ಪಿಎಫ್‌ಐ ವತಿಯಿಂದ ಅ.15ರಂದು ಮಧ್ಯಾಹ್ನ 1ಕ್ಕೆ ನಗರದ ಅರಮನೆ ಮೈದಾನದಲ್ಲಿ 'ನಮಗೂ ಹೇಳಲಿಕ್ಕಿದೆ' ಎಂಬ ಘೋಷಣೆಯಡಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಪಿಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಇ.ಅಬೂಬಕರ್ ಸಮಾವೇಶವನ್ನು ಉದ್ಘಾಟಿಸಲಿದ್ದು, ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್, ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ಉಮರೈನ್ ಮೆಆರೂಫ್ ರಹ್ಮಾನೀ, ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಶಾಸಕ ಝಮೀರ್ ಅಹ್ಮದ್ ಖಾನ್, ಮಾಜಿ ಸಚಿವೆ ಲಲಿತಾ ನಾಯಕ್, ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್, ಸಾಹಿತಿ ಬಂಜಗೆರೆ ಜಯಪ್ರಕಾಶ್ ಮತ್ತಿತರ ಗಣ್ಯರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಸಾಂವಿಧಾನಿಕ ಹಕ್ಕು ರಕ್ಷಣೆ ಪಿಎಫ್‌ಐ ಧ್ಯೇಯ: ಸಾಮಾಜಿಕವಾಗಿ ಅತ್ಯಂತ ತುಳಿತಕ್ಕೊಳಗಾದ ಮುಸ್ಲಿಮ್ ಹಾಗೂ ದಲಿತರ ಸಬಲೀಕರಣಕ್ಕಾಗಿ ಪಿಎಫ್‌ಐ ಸ್ಥಾಪನೆಗೊಂಡಿದೆ. ಲಕ್ಷಕ್ಕೂ ಮಿಕ್ಕಿದ ಕಾರ್ಯಕರ್ತರು ಮತ್ತು ಲಕ್ಷಾಂತರ ಬೆಂಬಲಿಗರನ್ನು ಹೊಂದಿರುವ ಪಿಎಫ್‌ಐ ಸಾಂವಿಧಾನಿಕ ಹಕ್ಕುಗಳಡಿ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯ ರಂಗದಲ್ಲಿ ತೊಡಗಿಸಿ ಸಮುದಾಯವನ್ನು ಶಕ್ತಗೊಳಿಸುವ ಉದ್ದೇಶ ಹೊಂದಲಾಗಿದೆ.
ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ಬಂದಿದೆ. ಅಭಿವ್ಯಕ್ತಿ ಸ್ವಾತಂತ್ರವನ್ನು ಹರಣ ಮಾಡಲಾಗುತ್ತಿದೆ. ಪ್ರಶ್ನೆ ಮಾಡುವವರಿಗೆ ದೇಶದ್ರೋಹ ಪಟ್ಟಕಟ್ಟಲಾಗುತ್ತಿದೆ. ಇದರ ಭಾಗವಾಗಿ ಪಿಎಫ್‌ಐ ಸಂಘಟನೆಯ ವಿರುದ್ಧವು ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಹೀಗಾಗಿ ಸಂಘ ಪರಿಹಾರ ಸಂಘಟನೆಗಳ ದುರ್ನೀತಿಯನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ 'ನಮಗೂ ಹೇಳಲಿಕ್ಕಿದೆ' ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಪಿಎಫ್‌ಐ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.







