ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್ ತುರ್ತು ನೋಟಿಸ್
ಬಿಎಂಆರ್‌ಸಿಎಲ್ ನೌಕರರ ಸಂಘಟನೆಗೆ ಮಾನ್ಯತೆ ನೀಡುವ ವಿಚಾರ
ಬೆಂಗಳೂರು, ಅ.13: ಬೆಂಗಳೂರು ಮೆಟ್ರೋ ರೈಲು ನಿಗಮ ನೌಕರರ ಸಂಘಟನೆಗೆ ಮಾನ್ಯತೆ ನೀಡುವ ವಿಚಾರದ ಕುರಿತು ಸಲ್ಲಿಕೆಯಾಗಿರುವ ತಕರಾರು ಅರ್ಜಿಯ ಸಂಬಂಧ ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್ ಶುಕ್ರವಾರ ತುರ್ತು ನೋಟಿಸ್ ಜಾರಿಗೊಳಿಸಿದೆ.
ನೌಕರರ ಸಂಘಟನೆಗೆ ಮಾನ್ಯತೆ ನೀಡಲು ನಿರಾಕರಿದ್ದ ಬಿಎಂಆರ್‌ಸಿಎಲ್ ಕ್ರಮ ಪ್ರಶ್ನಿಸಿ ಐಎನ್‌ಟಿಯುಸಿ ಸಂಯೋಜಿತ ನೌಕರರ ಸಂಘ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಅವರಿದ್ದ ಪೀಠ, ಬಿಎಂಆರ್‌ಸಿಎಲ್ ಹಾಗೂ ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ತುರ್ತು ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು.
ಕಳೆದ ಜುಲೈನಲ್ಲಿ ಪ್ರತಿಭಟನೆ ನಡೆಸಿದ್ದ ಮೆಟ್ರೋ ಸಿಬ್ಬಂದಿ, ನೌಕರರ ಸಂಘಟನೆಗೆ ಮಾನ್ಯತೆ ನೀಡಬೇಕೆಂದು ಆಗ್ರಹಿಸಿ ಬಿಎಂಆರ್‌ಸಿಎಲ್‌ಗೆ ಮನವಿ ಸಲ್ಲಿಸಿತ್ತು. ಆದರೆ ನೌಕರರ ಸಂಘದಲ್ಲಿ ಸೆಕ್ಷನ್ ಇಂಜಿನಿಯರ್‌ಗಳು, ಜ್ಯೂನಿಯರ್ ಇಂಜಿನಿಯರ್‌ಗಳು, ಕಸ್ಟಮರ್ ರಿಲೇಷನ್ ಅಧಿಕಾರಿಗಳು, ನಿಲ್ದಾಣ ನಿರ್ವಾಹಕರು, ರೈಲು ಚಾಲಕರನ್ನೂ ಸೇರಿಸಿಕೊಳ್ಳಲಾಗಿದೆ. ಈ ಉದ್ಯೋಗಿಗಳು ತಮ್ಮ ಪರಿಣಿತ ಕ್ಷೇತ್ರದಲ್ಲಿ ಮೇಲ್ವಿಚಾರಕ (ಸೂಪರ್‌ವೈಸರಿ) ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಸೂಪರ್‌ವೈಸರಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳನ್ನು ನೌಕರರ ಸಂಘಕ್ಕೆ ಸದಸ್ಯರನ್ನಾಗಿ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಬಿಎಂಆರ್‌ಸಿಎಲ್ ನೌಕರರ ಸಂಘಕ್ಕೆ ಮಾನ್ಯತೆ ನೀಡಲು ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದರು.
ಈ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರ ಸಂಘಟನೆ, ಸಂಘದ ಸದಸ್ಯರು ಸೂಪರ್‌ವೈಸರಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಿಎಂಆರ್‌ಸಿಎಲ್ ನೀಡಿರುವ ಮಾಹಿತಿ ಸತ್ಯಕ್ಕೆ ದೂರವಾದದ್ದು. ಬಿಎಂಆರ್‌ಸಿಎಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ 900ಕ್ಕೂ ಅಧಿಕ ಸಿಬ್ಬಂದಿ ಕೈಗಾರಿಕಾ ವ್ಯಾಜ್ಯ ಕಾಯ್ದೆಯಡಿ ಬರುತ್ತಾರೆ. ಹೀಗಾಗಿ ನೌಕರರ ಸಂಘಟನೆಗೆ ಮಾನ್ಯತೆ ನೀಡಲು ಬಿಎಂಆರ್‌ಸಿಎಲ್‌ಗೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ.







