ವಾಮದಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಸಭೆ

ಬಂಟ್ವಾಳ, ಅ. 13: ತಾಲೂಕಿನ ವಾಮದಪದವು ವ್ಯವಸಾಯ ಸೇವಾ ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ 31 ಲ. ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 1 ಡಿವಿಡೆಂಟ್‌ಅನ್ನು ನೀಡುವುದಾಗಿ ಸಂಘದ ಅಧ್ಯಕ್ಷ ಬಿ. ಯಶೋಧರ ಶೆಟ್ಟಿ ದಂಡೆ ಪ್ರಕಟಿಸಿದರು.
ಸಂಘದ ಪ್ರಗತಿ ಸಭಾಂಗಣದಲ್ಲಿ ನಡೆದ 2016-17ನೆ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಂಘವು 2068 ಸದಸ್ಯರನ್ನು ಹೊಂದಿದ್ದು 22.28 ಕೋ. ರೂ ವ್ಯವಹಾರ ನಡೆಸಿದೆ. ಪಾಲು ಬಂಡವಾಳ 1016.92 ಲ. ರೂ., ಠೇವಣಾತಿ 1043.83 ಲ. ರೂ., ಕೇಂದ್ರ ಬ್ಯಾಂಕಿನ ಸಾಲಗಳು 705.16ಲ. ರೂ. ಇದೆ. ಸಂಘದಲ್ಲಿ 165 ಸ್ವಸಹಾಯ ಗುಂಪುಗಳಿದ್ದು,ಅವುಗಳ ಉಳಿತಾಯ 40.06ಲ. ರೂ., ಸ್ವಸಹಾಯ ಗುಂಪುಗಳ ಸಾಲ 36.37ಲ. ರೂ., ಸದಸ್ಯರ ಹೊರಬಾಕಿ ಸಾಲ 1289.22ಲ.ರೂ. ಇದೆ. ಸಾಲ ವಸೂಲಾತಿ ಶೇ. 98.24ಆಗಿರುತ್ತದೆ. ಆಡಿಟ್ ಎ ವರ್ಗೀಕರಣ ಪಡೆದಿದೆ. ಸಂಘದಲ್ಲಿ ಕ್ಯಾಂಪ್ಕೋ ಸಹಭಾಗಿತ್ವದಲ್ಲಿ ವಾರದ 6 ದಿನಗಳಲ್ಲಿ ಅಡಿಕೆ ಹಾಗೂ ಕೊಕ್ಕೋ ಖರೀದಿ ಮಾಡಲಾಗುವುದು ಎಂದು ಹೇಳಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಲ್ಬರ್ಟ್ ಸಿ.ಡಿಸೋಜ 2016-17ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.
ಸಂಘದ ಉಪಾಧ್ಯಕ್ಷ ಗಣನಾಥ ಶೆಟ್ಟಿ ಕೆಮ್ಮಾರು, ಹಾಗೂ ನಿರ್ದೇಶಕ ಹರೀಶ್ ಗಟ್ಟಿ, ಪ್ರಭಾಕರ ಶೆಟ್ಟಿ, ಧರ್ಣಪ್ಪ ನಾಯ್ಕ ವಾರಿಜಾ, ಕಮಲಾಕ್ಷ ಶೆಟ್ಟಿ ಬೊಳ್ಳಾಜೆ, ಸಂಜೀವ ಪೂಜಾರಿ, ರಿಚಾರ್ಡ್ ಡಿ ಸೋಜ, ಪುಷ್ಪಲತಾ ಹಾಗೂ ದ.ಕ.ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ಕೇಶವ ಕಿಣಿ ಎಚ್. ಮತ್ತು ಸಿಬಂದಿ ವರ್ಗ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮರಣ ಹೊಂದಿದ ಸದಸ್ಯರ ಮನೆಯವರಿಗೆ ಮರಣ ನಿಧಿಯನ್ನು ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಂಘದ ವ್ಯಾಪ್ತಿಗೆ ಒಳಪಟ್ಟ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿಕಲ ಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಸಂಘದ ನಿರ್ದೇಶಕ ರಿಚಾರ್ಡ್ ಡಿ ಸೋಜ ವಂದಿಸಿದರು.







