ಪ್ರಧಾನಿ ಹಂಗಿಸುವ ಭರದಲ್ಲಿ ಅವಹೇಳನಕಾರಿ ಪದ ಬಳಕೆ
ಪೇಚಿಗೆ ಸಿಲುಕಿದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್

ಬೆಂಗಳೂರು, ಅ. 13: ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವ ಮೊದಲು ಜನರು ‘ನಮ್ಮ ಮೋದಿ ನಮ್ಮ ಮೋದಿ ಅಂತ ಹೊಗಳುತ್ತಿದ್ದರು. ಆದರೆ, ನೋಟು ರದ್ದತಿ ಬಳಿಕ ನಿಂದಿಸುತ್ತಿದ್ದಾರೆ’ ಎಂದು ಹಂಗಿಸುವ ಭರದಲ್ಲಿ ಸಚಿವ ರೋಷನ್‌ಬೇಗ್, ಪ್ರಧಾನಿ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.
ಅ.10ರಂದು ಪುಲಕೇಶಿನಗರ ಕ್ಷೇತ್ರ ವ್ಯಾಪ್ತಿಯ ಟ್ಯಾನರಿ ರಸ್ತೆಯಲ್ಲಿ ಏರ್ಪಡಿಸಿದ್ದ ಪಡಿತರ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ತಮಿಳು ಭಾಷೆಯಲ್ಲಿ ಮಾತನಾಡಿದ ರೋಷನ್ ಬೇಗ್, ‘ನೋಟು ರದ್ದತಿಯ ಬಳಿಕ ಮೋದಿ ಹೊಗಳುತ್ತಿದ್ದ ಜನರೇ ಅವರನ್ನು ನಿಂದಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರ್ಯಾರು ಅವರನ್ನು ಬೈಯುತ್ತಿಲ್ಲ. ಬದಲಿಗೆ ಗುಜರಾತಿನ ಮಾರ್ವಾಡಿಗಳು, ಬಿಜೆಪಿ ಬೆಂಬಲಿಗರು ಬೈಯುತ್ತಿದ್ದಾರೆ’ ಎಂದು ಟೀಕಿಸಿದರು.
ಭಾರತ ದೇಶವನ್ನು ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪಡಿಸಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ತಮ್ಮ ಬದುಕನ್ನೇ ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು. ಅದೇ ರೀತಿ ರಾಜೀವ್ ಗಾಂಧಿಯೂ ತಮ್ಮ ಜೀವನ ತ್ಯಾಗ ಮಾಡಿದರು. ಆದರೆ, ಇದೀಗ ರಾಹುಲ್ ಗಾಂಧಿ ಅವರನ್ನು ಮನಸೋ ಇಚ್ಛೆ ನಿಂದಿಸುತ್ತಿದ್ದಾರೆ.
‘ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ, ಕ್ಷೀರಭಾಗ್ಯ, ಮಾತೃಪೂರ್ಣ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. 5 ರೂ.ಗಳಿಗೆ ತಿಂಡಿ, 10 ರೂ.ಗೆ ಊಟ ನೀಡಲು ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದಿದ್ದೇವೆ. ಆದರೆ, ಯಡಿಯೂರಪ್ಪ ಸಿಎಂ ಆಗಿದ್ದಾಗ ಬರೀ ಶೋಭಾ ಮುಖ ನೋಡಿಕೊಂಡು ನಿಂತಿದ್ದರು’ ಎಂದು ಬೇಗ್ ವಾಗ್ದಾಳಿ ನಡೆಸಿದ ವೀಡಿಯೊ ಇದೀಗ ವೈರಲ್ ಆಗಿದೆ.
ಸಂಪುಟದಿಂದ ಕೈ ಬಿಡಲು ಒತ್ತಾಯ
ಸಚಿವ ಆರ್.ರೋಶನ್‌ಬೇಗ್, ಪ್ರಧಾನಮಂತ್ರಿ ವಿರುದ್ಧ ಅತ್ಯಂತ ಅವಹೇಳನಕಾರವಾಗಿ ಮಾಡಿರುವ ಟೀಕೆಯು ಭಾರತಕ್ಕೆ ಮಾಡಿರುವ ಅವಮಾನ. ಅಷ್ಟೇ ಅಲ್ಲದೆ, ಪ್ರಧಾನಿ ಪ್ರತಿನಿಧಿಸುವ 125 ಕೋಟಿ ಜನರಿಗೆ ಮಾಡಿದ ಅವಮಾನ. ಮಂತ್ರಿಯಾಗಿ ಸಭ್ಯ ನಡವಳಿಕೆಯನ್ನು ರೂಢಿಸಿಕೊಳ್ಳಬೇಕಾಗಿದ್ದ ರೋಶನ್‌ಬೇಗ್, ದೇಶದ ಪ್ರಧಾನಿಯನ್ನು ಅಗೌರವದಿಂದ ಸಂಬೋಧಿಸಿದ್ದಾರೆ. ಇಂತಹ ಮಂತ್ರಿಯನ್ನು ಮುಖ್ಯಮಂತ್ರಿ ಒಂದೇ ಒಂದು ಕ್ಷಣವೂ ಸಂಪುಟದಲ್ಲಿ ಮುಂದುವರಿಸಬಾರದು. ತಕ್ಷಣವೇ ಅವರನ್ನು ವಜಾಗೊಳಿಸಬೇಕು.
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ದೇಶದ ಪ್ರಧಾನಿ ಮೋದಿಯ ಬಗ್ಗೆ ನನಗೆ ಅತೀವ ಗೌರವವಿದೆ. ಅವರ ಕೇವಲ ಬಿಜೆಪಿಯ ಪ್ರಧಾನಿಯಲ್ಲ, ದೇಶದ ಪ್ರಧಾನಿ. ತಮಿಳುಭಾಷೆ ನನಗೆ ಸರಿಯಾಗಿ ಗೊತ್ತಿಲ್ಲ. ಜನರು, ವರ್ತಕರು, ಬೆಂಬಲಿಗರು ಮತ್ತು ಮಾರ್ವಾಡಿಗಳು ಜಿಎಸ್ ಟಿ ಹಾಗೂ ನೋಟು ರದ್ದತಿಯ ನಂತರ ಅವರು ಹೇಳಿದನ್ನಷ್ಟೇ ನಾನು ಉಲ್ಲೇಖ ಮಾಡಿದ್ದೇನೆ. ಆದರೆ, ಬಿಜೆಪಿ ಮುಖಂಡರು ಈ ವಿಚಾರವನ್ನು ಮುಂದಿಟ್ಟುಕೊಂಡು ನನ್ನನ್ನು ಗುರಿ ಮಾಡುತ್ತಿದ್ದಾರೆ.
-ರೋಷನ್ ಬೇಗ್, ನಗರಾಭಿವೃದ್ಧಿ ಸಚಿವ







