ಭಾರತದಿಂದ ಯುದ್ಧವಿರಾಮ ಉಲ್ಲಂಘನೆ: ಭದ್ರತಾ ಮಂಡಳಿಯ ಖಾಯಂ ಸದಸ್ಯರಿಗೆ ಪಾಕ್ ದೂರು

ಇಸ್ಲಾಮಾಬಾದ್, ಅ. 13: ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತ ಯುದ್ಧವಿರಾಮ ಉಲ್ಲಂಘನೆಗಳನ್ನು ನಡೆಸುತ್ತಿದೆ ಎಂಬುದಾಗಿ ಪಾಕಿಸ್ತಾನ ಗುರುವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯ ದೇಶಳಿಗೆ ದೂರು ನೀಡಿದೆ.
ಅಮೆರಿಕ, ರಶ್ಯ, ಬ್ರಿಟನ್, ಚೀನಾ ಮತ್ತು ಫ್ರಾನ್ಸ್ ಖಾಯಂ ಸದಸ್ಯ ದೇಶಗಳಾಗಿವೆ.
‘ಭಾರತ ನಡೆಸುತ್ತಿರುವ ಯುದ್ಧವಿರಾಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆಯಲ್ಲಿ ತೀರಾ ಹೆಚ್ಚಳ’ವಾಗಿರುವ ಬಗ್ಗೆ ಪಾಕಿಸ್ತಾನದ ವಿದೇಶ ಕಾರ್ಯದರ್ಶಿ ತೆಹ್ಮೀನಾ ಜಂಜುವ ಮತ್ತು ಡಿಜಿಎಂಒ ಮೇಜರ್ ಜನರಲ್ ಸಾಹಿರ್ ಶಂಶದ್ ಮಿರ್ಝಾ ಇಸ್ಲಾಮಾಬಾದ್‌ನಲ್ಲಿ 5 ಖಾಯಂ ದೇಶಗಳ ಮುಖ್ಯಸ್ಥರಿಗೆ ವಿವರಿಸಿದರು ಎಂದು ವಿದೇಶ ಕಚೇರಿಯ ಪ್ರಕಟನೆಯೊಂದು ತಿಳಿಸಿದೆ.
‘ನಿಯಂತ್ರಣ ರೇಖೆ’ಯಲ್ಲಿ ಭಾರತೀಯ ಸೇನೆಯು ನಡೆಸುತ್ತಿರುವ ಅಭೂತಪೂರ್ವ ಯುದ್ಧವಿರಾಮ’ವನ್ನು ನಿಲ್ಲಿಸುವ ಅಗತ್ಯಕ್ಕೆ ವಿದೇಶ ಕಾರ್ಯದರ್ಶಿ ಒತ್ತು ನೀಡಿದರು.
ಜನವಸತಿ ಪ್ರದೇಶಗಳಲ್ಲಿ ನಡೆಸಲಾದ ಯುದ್ಧವಿರಾಮ ಉಲ್ಲಂಘನೆಗಳಿಂದಾಗಿ ಈ ವರ್ಷ 45 ನಾಗರಿಕರು ಮೃತಪಟ್ಟಿದ್ದಾರೆ ಹಾಗೂ155 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಜಂಜುವ ಹೇಳಿದರು.





