ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಜಾರಿಗೆ ಬಿಜೆಪಿ ಒತ್ತಾಯ

ಬಂಟ್ವಾಳ, ಅ. 13: ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ವೈಜ್ಞಾನಿಕ ಮರಳು ನೀತಿ ಜಾರಿ, ಜಿಲ್ಲೆಯಿಂದ ಹೊರಭಾಗಕ್ಕೆ ಮರಳು ಸಾಗಾಟ ಸಂಪೂರ್ಣ ನಿಷೇಧ ಹಾಗೂ ಜಿಲ್ಲೆಯ ಜನರಿಗೆ ನಿರಂತರವಾಗಿ ನ್ಯಾಯಯುತ ಬೆಲೆಯಲ್ಲಿ ಮರಳು ದೊರಕಿಸಿಕೊಡುವಂತೆ ಒತ್ತಾಯಿಸಿ ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಬಿ.ಸಿ.ರೋಡಿನಲ್ಲಿ ಶುಕ್ರವಾರ ಪ್ರತಿಭಟನಾ ಸಭೆ ನಡೆಯಿತು.
ಬಂಟ್ವಾಳ ಕ್ಷೇತ್ರ ಬಿಜೆಪಿ ನಾಯಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಮಾತನಾಡಿ, ಮರಳು ದ.ಕ.ಜಿಲ್ಲೆಗೆ ದೇವರು ಕೊಟ್ಟ ಸಂಪತ್ತು. ಆದರೆ ಅದನ್ನು ಸರಿಯಾಗಿ ವಿನಿಯೋಗವಾಗುತ್ತಿಲ್ಲ. ಪ್ರತಿ ತಿಂಗಳು 3ರಿಂದ 5 ಸಾವಿರ ಲೋಡ್ ಮರಳು ಹೊರ ಜಿಲ್ಲೆಗಳಿಗೆ ಸಾಗಾಟವಾಗುತ್ತಿದ್ದು, ಸಾಕಷ್ಟು ರಾಜಧನವನ್ನು ಸಂಪಾದಿಸಬಹುದು. ಮರಳಿನ ರಾಜಧನದಿಂದಲೇ ದ.ಕ.ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧಿಸಬಹುದು. ಆದರೆ ಕೆಲವೇ ಕೆಲವರ ಅಧೀನದಲ್ಲಿ ಮರಳಿನ ಸಂಪತ್ತು ಅಡಗಿದೆ ಎಂದು ಆರೋಪಿಸಿದರು.
ಒಂದು ಪರವಾನಗಿಯಲ್ಲಿ ದಿನಕ್ಕೆ 8ರಿಂದ 10 ಲಾರಿಗಳು ಮರಳು ಸಾಗಾಟವಾಗುತ್ತವೆ. ಉಡುಪಿ ಜಿಲ್ಲೆಯಲ್ಲಿ ಪ್ರತ್ಯೇಕ ಮರಳು ನೀತಿ ಇದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಇದನ್ನು ಜಿಲ್ಲೆಯಲ್ಲಿ ಯಾಕೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದರು.
ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಆನಂದ ಮಾತನಾಡಿ, ಸರಕಾರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, 23ರಂದು ಬಂಟ್ವಾಳ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ ಭಟ್ ಮಾತನಾಡಿ, ರಾಜ್ಯದ ಸಿದ್ದರಾಮಯ್ಯ ಸರಕಾರ ಭ್ರಷ್ಟಾಚಾರದಿಂದ ಕೂಡಿದೆ. ದ.ಕ.ಜಿಲ್ಲೆಯಲ್ಲಿ ಗಾಂಜಾ ಮಾಫಿಯಾ ಬೇರುಬಿಟ್ಟಿದ್ದು, ಅದರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕಾದ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮೌನವಹಿಸಿದ್ದಾರೆ ಎಂದು ಟೀಕಿಸಿದರು.
ಜಿಲ್ಲಾ ಕಾರ್ಯದರ್ಶಿ ಸುಗುಣ ಕಿಣಿ, ಮಾಜಿ ಶಾಸಕ ರುಕ್ಮಯ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಾಕ್ಷಿ ಕೆ ಪೂಜಾರಿ, ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ತಾಲೂಕು ಪಂಚಾಯತ್ ಸದಸ್ಯರಾದ ಕುಲ್ಯಾರು ನಾರಾಯಣ ಶೆಟ್ಟಿ, ಗೀತಾ ಚಂದ್ರಶೇಖರ್, ಮೊನಪ್ಪ ದೇವಸ್ಯ, ರಮಾನಾಥ ರಾಯಿ, ಗಣೇಶ್ ರೈ, ಸೀಮಾ ಮಾಧವ, ದಿನೇಶ್ ಭಂಡಾರಿ, ಧರ್ಣಮ್ಮ, ವಿಜಯ ರೈ, ಹರಿಶ್ಚಂದ್ರ ಪೂಜಾರಿ, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಮಹಾಬಲ ಶೆಟ್ಟಿ, ಭಾಸ್ಕರ್ ಟೈಲರ್, ಜನಾರ್ಧನ ಕುಲಾಲ್, ಸಂತೋಷ್ ರಾಯಿ, ಹರೀಶ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಗಂಗಾಧರ ಕೋಟ್ಯಾನ್, ವಸಂತ ಅಣ್ಣಳಿಕೆ, ಗೋಪಾಲ ಸುವರ್ಣ, ಗೋಪಾಲಕೃಷ್ಣ ಚೌಟ, ಶಶಿಕಾಂತ ಶೆಟ್ಟಿ ಸರಪಾಡಿ, ಆನಂದ ಶಂಭೂರು, ಯಶೋಧರ ಕರ್ಬೆಟ್ಟು, ರವೀಶ್ ಶೆಟ್ಟಿ, ದಯಾನಂದ ಸಪಲ್ಯ, ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಸ್ವಾಗತಿಸಿ, ನಿರೂಪಿಸಿದರು. ಸೀತಾರಾಮ ಪೂಜಾರಿ ವಂದಿಸಿದರು.







