ಚಿಕ್ಕಮಗಳೂರು: ಭಾರೀ ಮಳೆ; ಓರ್ವ ಮೃತ್ಯು
ಚಿಕ್ಕಮಗಳೂರು, ಅ.13: ಜಿಲ್ಲೆಯ ವಿವಿಧ ಕಡೆಗಳಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಮಳೆ ಸುರಿದಿದ್ದು, ತಾಲೂಕಿನ ಅಂಬಳೆಯ ಕೋಡಿಹಳ್ಳಿ ಎಂಬಲ್ಲಿ ಸಿಡಿಲಿನ ಹೊಡೆತಕ್ಕೆ ಓರ್ವ ಬಲಿಯಾಗಿರುವ ಘಟನೆ ನಡೆದಿದೆ.
ಸಿಡಿಲಿಗೆ ಬಲಿಯಾದಾತನನ್ನು ಅರಿಶಿಣಗುಪ್ಪೆ ಗ್ರಾಮದ ಲಕ್ಷ್ಮಣ್(52) ಎಂದು ಗುರುತಿಸಲಾಗಿದೆ. ಸಂಜೆ 4:30ಕ್ಕೆ ಲಕ್ಷ್ಮಯ್ಯ ಅವರು ತಮ್ಮ ಹೊಲದಲ್ಲಿ ಅವರೆಕಾಯಿ ಕುಯ್ಯುತ್ತಿದ್ದ ವೇಳೆ ಮಳೆ ಬೀಳಲು ಆರಂಭಿಸಿದೆ.
ತಕ್ಷಣ ರಕ್ಷಣೆಗಾಗಿ ಸಮೀಪದಲ್ಲೇ ಇದ್ದ ಮರದಡಿಯಲ್ಲಿ ನಿಂತಿದ್ದರು. ಈ ಸಮಯದಲ್ಲಿ ಮರಕ್ಕೆ ಸಿಡಿಲು ಬಡಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಲಕ್ಷ್ಮಯ್ಯ ಅವರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದರು.
ಮಳೆಯಿಂದ ನಗರದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಓಪ್ಪುನಗರ, ಪಂಪನಗರ, ಶಂಕರಪುರ ಮುಂತಾದ ಕಡೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಮನೆ ಮಂದಿ ಸಂಕಟಪಡುವಂತಾಗಿದೆ.
ಮೂಡಿಗೆರೆ ತಾಲೂಕಿನ ಗೋಣಿಬೀಡು, ಬಣಕಲ್, ಕೊಟ್ಟಿಗೆಹಾರ, ಬಾಳೂರು ಸಹಿತ ಆಲ್ದೂರು, ಕಡಬಗೆರೆ, ಬಾಳೆಹೊನ್ನೂರು, ಕೊಪ್ಪ ಭಾಗದಲ್ಲೂ ಉತ್ತಮ ಮಳೆ ಬಿದ್ದಿದೆ.







