ಅ.23: ಕಿತ್ತೂರು ಚೆನ್ನಮ್ಮ ಜಯಂತಿ
ಶಿವಮೊಗ್ಗ, ಅ. 13: ರಾಜ್ಯ ಸರಕಾರ ಇದೇ ಮೊದಲ ಬಾರಿಗೆ ವೀರ ರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯನ್ನು ಅ. 23ರಂದು ಆಚರಿಸಲು ನಿರ್ದೇಶನ ನೀಡಿದ್ದು, ಜಿಲ್ಲೆಯಲ್ಲಿ ಆಚರಣೆಗೆ ಸಿದ್ಧತೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪಸೂಚನೆ ನೀಡಿದ್ದಾರೆ.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ಬೆಳಗ್ಗೆ 11ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಜಯಂತಿ ಕಾರ್ಯಕ್ರಮ ನಡೆಯಲಿದೆ. ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಗೌರವ ಸಲ್ಲಿಕೆ, ಉಪನ್ಯಾಸ ಕಾರ್ಯಕ್ರಮ, ರಾಣಿ ಚೆನ್ನಮ್ಮ ಕುರಿತು ರೂಪಕ, ನಾಟಕ ಇತ್ಯಾದಿ ಕಾರ್ಯಕ್ರಮ ಆಯೋಜಿಸಲು ಕ್ರಮ ಕೈಗೊಳ್ಳಬೇಕು. ಚೆನ್ನಮ್ಮ ಕುರಿತು ಫ್ಯಾನ್ಸಿ ವೇಷ ಸ್ಪರ್ಧೆ ಆಯೋಜಿಸಲು ಶಾಲಾ ಕಾಲೇಜಿನವರು ಮುಂದೆ ಬಂದರೆ ಸಹಕಾರ ನೀಡಲಾಗುವುದು. ಇದೇ ರೀತಿ ಸಮುದಾಯದ ವತಿಯಿಂದ ವೀರ ರಾಣಿ ಚೆನ್ನಮ್ಮ ಜಯಂತಿ ಮೆರವಣಿಗೆಯನ್ನು ನಿಯಮಾನುಸಾರ ಮಾಡಲು ಸಹಕರಿಸಲಾಗುವುದು ಎಂದು ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಸ್ವಾಗತಿಸಿದರು. ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಸಮುದಾಯಗಳ ಮುಖಂಡರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.





