ಕಳ್ಳತನ ಪ್ರಕರಣ: ಮೂವರ ಬಂಧನ; ರಿವಾಲ್ವರ್ ಸೇರಿ ಚಿನ್ನಾಭರಣ ವಶ

ಮಡಿಕೇರಿ, ಅ.13: ನಗರದಲ್ಲಿ ನಡೆದ ಎರಡು ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ ಚಿನ್ನಾಭರಣ ಸೇರಿದಂತೆ ರಿವಾಲ್ವರ್, 3 ಸಜೀವ ಗುಂಡುಗಳು ಹಾಗೂ ಎಸ್‌ಬಿಬಿಎಲ್ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.
ವಶ ಪಡಿಸಿಕೊಂಡ ಮಾಲಿನ ಒಟ್ಟು ಮೌಲ್ಯ 18 ಲಕ್ಷ ರೂ.ವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಅಪರಾಧ ಪತ್ತೆದಳ ಮತ್ತು ಮಡಿಕೇರಿ ನಗರ ಠಾಣಾಧಿಕಾರಿಗಳ ಯಶಸ್ವಿ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದರು.
ಮೂಲತಃ ಕೇರಳದ ಇರಿಟ್ಟಿ ತಾಲೂಕಿನ ಉಲಿಕ್ಕಲ್ ಗ್ರಾಮದವನಾದ, ಪ್ರಸ್ತುತ ಸೋಮವಾರಪೇಟೆ ಗಾಂಧಿ ನಗರವಾಸಿ ಸಲೀಂ( 32), ಸುಂಟಿಕೊಪ್ಪಹೋಬಳಿಯ ಗರಗಂದೂರು ಗ್ರಾಮದ ನಿವಾಸಿ ಕೆ. ಶರತ್(25), ಸೋಮವಾರಪೇಟೆ ಗಾಂಧಿ ನಗರದ ನಿವಾಸಿ ಅನಿಲ್ ಕುಮಾರ್(43) ಎಂಬವರು ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ಸವಿನ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ.
ಪೊಲೀಸರ ಎರಡು ತಂಡಗಳನ್ನು ರಚಿಸಿ ತನಿಖೆೆಯನ್ನು ತೀವ್ರಗೊಳಿಸಲಾಯಿತು. ಬಂಧನಕ್ಕೊಳಗಾಗಿ ಬಿಡುಗಡೆಗೊಂಡಿದ್ದ ಟಿ.ಎ. ಸಲೀಂ ಎಂಬಾತನನ್ನು ಮೊದಲು ವಿಚಾರಣೆಗೆ ಒಳಪಡಿಸಲಾಯಿತು. ಈ ಸಂದರ್ಭ ಎರಡು ಪ್ರಕರಣಗಳ ಸಂಪೂರ್ಣ ಮಾಹಿತಿ ಬಹಿರಂಗಗೊಂಡಿದೆಯೆಂದು ಎಸ್ಪಿ ರಾಜೇಂದ್ರ ಪ್ರಸಾದ್ ತಿಳಿಸಿದರು.
ಆರೋಪಿ ಸಲೀಂ, ಶರತ್ ಹಾಗೂ ಅನಿಲ್ ಬಗ್ಗೆ ನೀಡಿದ ಮಾಹಿತಿಯನ್ನಾಧರಿಸಿ ಇಬ್ಬರನ್ನು ಬಂಧಿಸಲಾಯಿತು. ಅಲ್ಲದೆ, ಆರೋಪಿ ಸಲೀಂನ ಮತ್ತೊಬ್ಬ ಸಹಚರ ಸವಿನ್ ಪರಾರಿಯಾಗಿದ್ದು ಈತನನ್ನು ಶೀಘ್ರ ಬಂಧಿಸಲಾಗುವುದೆಂದು ಎಸ್ಪಿ ತಿಳಿಸಿದರು.







